ಬೆಂಗಳೂರು: ಮಹತ್ವಾಕಾಂಕ್ಷೆಯ ಚಂದ್ರಯಾನ-3 ಬಾಹ್ಯಾಕಾಶ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು ಕೆಲಸ ಪ್ರಗತಿಯಲ್ಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದರು. ಈ ಮೂಲಕ 2020ರ ಹೊಸ ವರ್ಷದ ಮೊದಲ ದಿನವೇ ದೇಶದ ಜನರಿಗೆ ಅವರು ಸಿಹಿ ಸುದ್ದಿ ನೀಡಿದ್ದಾರೆ.
ಇಂದು ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಚಂದ್ರಯಾನ-3ರಲ್ಲಿ ಲ್ಯಾಂಡರ್ ಮತ್ತು ರೋವರ್ಗಳು ಮೃದುವಾಗಿ ಚಂದ್ರನ ಮೇಲೆ ಇಳಿಯಲಿವೆ ಎಂದರು. ಇದಕ್ಕಾಗಿ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಇನ್ನು ಮಾನವ ಸಹಿತ ಗಗನಯಾನಕ್ಕಾಗಿ ನಾಲ್ವರು ವಿಜ್ಞಾನಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಸಿವನ್ ವಿವರಿಸಿದರು.
ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗಲಿದೆ. ಈ ಯೋಜನೆಗೆ ತಗಲುವ ವೆಚ್ಚ ₹ 250 ಕೋಟಿ. 2020ರ ವರ್ಷಾಂತ್ಯದಲ್ಲಿ ಅಥವಾ 2021ರ ಆರಂಭದಲ್ಲಿ ಚಂದ್ರನಲ್ಲಿಗೆ ತಲುಪುವ ಯೋಜನೆ ಇದೆ. ಚಂದ್ರಯಾನ-2ಕ್ಕೆ ಬಳಸಿದ್ದ ಪ್ರಯೋಗಗಳನ್ನೇ ಚಂದ್ರಯಾನ-3ಕ್ಕೂ ಬಳಸಲಾಗುತ್ತದೆ. ಇನ್ನು ಮಾನವ ಸಹಿತ ಗಗನಯಾನಕ್ಕೆ 365 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಇಸ್ರೋ ಅಧ್ಯಕ್ಷರು ಮಾಹಿತಿ ನೀಡಿದ್ರು.
ಚಂದ್ರಯಾನ-2 ಅನ್ನು ಲ್ಯಾಂಡಿಂಗ್ ಮಾಡುವಲ್ಲಿ ನಾವು ಸ್ವಲ್ಪದರಲ್ಲಿ ವಿಫಲವಾದೆವು. ಈ ಪ್ರಯೋಗದಿಂದ ನಾವು ತುಂಬಾ ಕಲಿತಿದ್ದೇವೆ. ಇದು ಭಾರತದ ಮೊದಲ ಪ್ರಯತ್ನವಾಗಿತ್ತು. ಸೆಪ್ಟಂಬರ್ 7ರಂದು ನಿಗದಿತ ಸ್ಥಳದಿಂದ 400 ಮೀಟರ್ಗಳ ಅಂತರದಲ್ಲಿ ವಿಕ್ರಮ್ ಲ್ಯಾಂಡರ್ ಕೈ ತಪ್ಪಿತ್ತು ಎಂದು ಸಿವನ್ ಇದೇ ವೇಳೆ ಹೇಳಿದ್ರು.