ನವದೆಹಲಿ:ಮಹಾತ್ಮ ಗಾಂಧಿ ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದ ಬಿಜೆಪಿ ನಾಯಕಿ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ನೋಬೆಲ್ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಕೈಲಾಶ್ ಸತ್ಯಾರ್ಥಿ ಕಿಡಿ ಕಾರಿದ್ದಾರೆ.
ಟ್ವೀಟ್ ಮೂಲಕ ಪ್ರಗ್ಯಾ ಹೇಳಿಕೆಯನ್ನು ಖಂಡಿಸಿರುವ ಅವರು, ಗೋಡ್ಸೆ ಗಾಂಧಿ ಅವರ ದೇಹವನ್ನು ಕೊಲೆ ಮಾಡಿದ. ಆದರೆ ಪ್ರಗ್ಯಾಳಂತಹ ಮಂದಿ ಅಹಿಂಸೆ, ಶಾಂತಿ, ಸಹಿಷ್ಣುತೆ ಸಾರಿದ ಗಾಂಧಿ ಆತ್ಮವನ್ನೇ ಕೊಲ್ಲುತ್ತಿದ್ದಾರೆ ಎಂದಿದ್ದಾರೆ.
ಗಾಂಧಿ ಎಲ್ಲ ಪಕ್ಷ ಹಾಗೂ ರಾಜಕೀಯವನ್ನೂ ಮೀರಿದವರು. ಬಿಜೆಪಿ ಈಗಲಾದರೂ ಇಂತಹವರಿಂದ ಸಣ್ಣ ಅನುಕೂಲ ಪಡೆಯುವುದನ್ನು ಬಿಟ್ಟು, ಇವರನ್ನು ಕೂಡಲೇ ಪಕ್ಷದಿಂದ ಹೊರ ಹಾಕಬೇಕು. ಈ ಮೂಲಕ ರಾಜಧರ್ಮ ಪಾಲಿಸಬೇಕು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕಮಲ್ ಹಾಸನ್ ಪ್ರಚಾರದ ವೇಳೆ, ಗೋಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಎಂಬ ಹೇಳಿಕೆಯಿಂದ ವಿವಾದ ಆರಂಭಗೊಂಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಗ್ಯಾ, ಗೋಡ್ಸೆ ಓರ್ವ ದೇಶಭಕ್ತ ಎಂದು ವಿವಾದವನ್ನು ಮತ್ತಷ್ಟು ಹೆಚ್ಚಿಸಿತ್ತು.