ಹೈದರಾಬಾದ್:ಚೀನಾ ಸರ್ಕಾರದ ಅಧಿಕೃತ ಮುಖವಾಣಿ ಪತ್ರಿಕೆಯಾಗಿರುವ ಗ್ಲೋಬಲ್ ಟೈಮ್ಸ್, ಈಗ ಭಾರತೀಯ ರಾಷ್ಟ್ರೀಯವಾದಿಗಳಿಗೆ ಎಚ್ಚರಿಕೆ ನೀಡಲು ಹೊರಟಿದೆ. ಸೋಮವಾರದ ಆವೃತ್ತಿಯಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ ಭಾರತೀಯರಿಗೆ ಎಚ್ಚರಿಕೆ ನೀಡಲಾಗಿದೆ.
"ನಾನು ಭಾರತೀಯ ರಾಷ್ಟ್ರೀಯವಾದಿಗಳಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ: ಶಸ್ತ್ರಾಸ್ತ್ರಗಳಿಲ್ಲದ ಸಂಘರ್ಷದಲ್ಲಿಯೇ ನಿಮ್ಮ ಸೈನಿಕರು ನಮ್ಮ ಸೈನಿಕರನ್ನು ಸೋಲಿಸಲಾಗಲಿಲ್ಲವೆಂದ ಮೇಲೆ ನಿಮ್ಮ ಗನ್, ಮದ್ದು ಗುಂಡುಗಳು ಯಾವುದೇ ಪ್ರಯೋಜನಕ್ಕೆ ಬರಲಾರವು. ಚೀನಾ ಮಿಲಿಟರಿ ಬಲ ಭಾರತಕ್ಕಿಂತ ಹೆಚ್ಚಾಗಿದೆ ಎಂಬುದು ನೆನಪಿರಲಿ." ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ಚೀನಾ ಗಡಿಯಲ್ಲಿ ಭಾರತ ತನ್ನ ಯುದ್ಧ ನಿಯಮಗಳನ್ನು ಬದಲಿಸಿ, ಚೀನಿಯರ ವಿರುದ್ಧ ಅಗತ್ಯ ಬಿದ್ದಲ್ಲಿ ಗನ್ ಬಳಸಲು ಭಾರತೀಯ ಸೈನಿಕರಿಗೆ ಪ್ರಧಾನಿ ನರೇಂದ್ರ ಮೋದಿ ಅನುಮತಿ ನೀಡಿದ ಬೆನ್ನಲ್ಲೇ ಚೀನಾ ಇಲ್ಲಿನ ರಾಷ್ಟ್ರವಾದಿಗಳಿಗೆ ಎಚ್ಚರಿಕೆ ನೀಡಿದ್ದು ಗಮನಾರ್ಹ.
ಗಡಿಯಲ್ಲಿ ಸಂಘರ್ಷ ನಡೆಸಿದ ಚೀನಾ ಈಗ ಮೈಂಡ್ ಗೇಮ್ ಸಹ ಆಡುತ್ತಿರುವಂತೆ ಕಂಡು ಬರುತ್ತಿದ್ದು, ಸಂಪಾದಕೀಯಗಳ ಮೂಲಕ ಭಾರತ ಸರ್ಕಾರ ಹಾಗೂ ಇಲ್ಲಿನ ಜನರನ್ನು ಹೆದರಿಸುವ ಪ್ರಯತ್ನ ಮಾಡುತ್ತಿರುವಂತೆ ಕಂಡುಬರುತ್ತಿದೆ.
ಚೀನಾ ಸರ್ಕಾರದ ಕೈಗೊಂಬೆಯಾಗಿರುವ ಗ್ಲೋಬಲ್ ಟೈಮ್ಸ್ ಮುಖ್ಯ ಸಂಪಾದಕ ಹು ಕ್ಸಿಜಿನ್, "ಒಂದು ವೇಳೆ ಗಡಿಯಲ್ಲಿ ಭಾರತವು ಚೀನಾದೊಂದಿಗೆ ತಂಟೆ ಮುಂದುವರಿಸಿದಲ್ಲಿ, ಅದು ಮೊಟ್ಟೆಯೊಂದು ತಾನಾಗಿಯೇ ಗೋಡೆಗೆ ಹಾಯ್ದು ಒಡೆದಂತಾಗುತ್ತದೆ." ಎಂದು ಬರೆದುಕೊಂಡಿದ್ದಾರೆ.