ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಭಾರೀ ಜನ ಮನ್ನಣೆ ದೊರಕಿದ್ದು, ಮೋದಿ ಗೆಲುವಿಗೆ ವಿಶ್ವದ ನಾಯಕರೆಲ್ಲ ಶುಭಾಶಯ ತಿಳಿಸಿದ್ದಾರೆ.
ಟ್ವಿಟರ್ ಮೂಲಕ ಪ್ರಧಾನಿ ಮೋದಿಗೆ ವಿಶ್ ಮಾಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತಿದೊಡ್ಡ ಗೆಲುವು ಸಾಧಿಸಿದ ಪ್ರಧಾನಿ ಮೋದಿ ಮತ್ತು ಬಿಜೆಪಿಗೆ ಶುಭಾಶಯ. ಭಾರತ ಮತ್ತು ಅಮೆರಿಕ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ
ಭಾರತದಲ್ಲಿ ಮೋದಿ ಗೆಲುವು ಸ್ಪಷ್ಟವಾಗುತ್ತಿದ್ದಂತೆ ಟ್ವೀಟ್ ಮಾಡಿರುವ ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಅಮೆರಿಕಾದ ಮಿತ್ರ ರಾಷ್ಟ್ರ ಮತ್ತು ನಮ್ಮ ಸ್ನೇಹಿತ ನರೇಂದ್ರ ಮೋದಿ ಪಕ್ಷ ಜಯಗಳಿಸಿದ್ದು, ಅವರಿಗೆ ಶುಭಾಶಯ ತಿಳಿಸುತ್ತೇನೆ. ಪ್ರಜಾಪ್ರಭುತ್ವಕ್ಕೆ ಭಾರತೀಯ ಜನರ ಬದ್ಧತೆಯ ಪ್ರದರ್ಶನವಾಗಿದೆ. ಭಾರತದೊಂದಿಗಿನ ನಮ್ಮ ಭಾಂಧವ್ಯ ಮುಂದುವರಿಯಲಿದೆ ಎಂದೂ ತಿಳಿಸಿದ್ದಾರೆ.
ಇತ್ತ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯಾ ಕೂಡ ಟ್ವೀಟ್ ಮಾಡಿದ್ದು, ಭಾರತದ ಪ್ರಧಾನಿಯಾಗಿ ಚುನಾವಣೆಯಲ್ಲಿ ಮರು ಆಯ್ಕೆಯಾದ ನರೇಂದ್ರ ಮೋದಿಗೆ ಅಭಿನಂದನೆಗಳು. ಶಿಕ್ಷಣ ಮತ್ತು ಹೊಸತನದ ಮೂಲಕ ಕೆನಡಿಯನ್ನರು ಮತ್ತು ಭಾರತೀಯರ ಜೀವನ ಸುಧಾರಿಸಲು ಒಟ್ಟಾಗಿ ಕೆಲಸ ಮಾಡೋಣ, ವ್ಯಾಪಾರದಲ್ಲಿ, ಬಂಡವಾಳ ಹೂಡುವುದು ಮತ್ತು ವಾತಾವರಣ ಬದಲಾವಣೆಗೆ ಒಟ್ಟಾಗಿ ಹೋರಾಡೋಣ ಎಂದಿದ್ದಾರೆ.
ಅತ್ತ ಯುಎಸ್ ಸೆಕರೇಟರಿ ಪೊಂಪಿಯೊ ಕೂಡ ಟ್ವೀಟ್ ಮಾಡಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ನರೇಂದ್ರ ಮೋದಿ ಮತ್ತು ಎನ್ಡಿಎಗೆ ಅಭಿನಂದನೆಗಳು. ಐತಿಹಾಸಿಕ ಸಂಖ್ಯೆಯಲ್ಲಿ ತಮ್ಮ ಮತ ಚಲಾಯಿಸಿದ ಭಾರತೀಯ ಜನರಿಗೆ ಅಭಿನಂದನೆಗಳು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಚುನಾವಣೆ ಪ್ರಪಂಚಕ್ಕೆ ಸ್ಫೂರ್ತಿಯಾಗಿದೆ ಎಂದಿದ್ದಾರೆ.
ಇತ್ತ ಚೀನಾ, ರಷ್ಯಾ, ಇಸ್ರೇಲ್, ಭೂತಾನ್, ನೇಪಾಳ ಸೇರಿದಂತೆ ಹಲವು ದೇಶಗಳ ನಾಯಕರು ಶುಭಾಶಯ ತಿಳಿಸಿದ್ದಾರೆ.