ನವದೆಹಲಿ:ಮೈಲ್ಡ್ ಹಾಗೂ ಮೋಡರೇಟ್ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸುವ ಫ್ಯಾಬಿಫ್ಲೂ ಎಂಬ ಬ್ರಾಂಡ್ ಹೆಸರಿನ ಆ್ಯಂಟಿವೈರಲ್ ಔಷಧಿ ಫಾವಿಪಿರಾವೀರ್ ಟ್ಯಾಬ್ಲೆಟ್ನ ಬೆಲೆಯನ್ನು ಶೇ. 27ರಷ್ಟು ಕಡಿತಗೊಳಿಸುವುದಾಗಿ ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಘೋಷಿಸಿದೆ.
ಕಳೆದ ತಿಂಗಳು ಫ್ಯಾಬಿಫ್ಲೂವನ್ನು ಪ್ರತಿ ಟ್ಯಾಬ್ಲೆಟ್‌ಗೆ 103 ರೂ.ನಂತೆ ಬೆಲೆ ನಿಗದಿಪಡಿಸಿತ್ತು. ಇದೀಗ ಶೇ. 27ರಷ್ಟು ಬೆಲೆ ಕಡಿತಕೊಳಿಸಿ, ಒಂದು ಟ್ಯಾಬ್ಲೆಟ್‌ಗೆ 75 ರೂ.ನಂತೆ ಬೆಲೆ ನಿಗದಿಪಡಿಸಲಾಗಿದೆ.
"ಹೆಚ್ಚಿನ ಮಾರಾಟ ಮತ್ತು ಉತ್ತಮ ಪ್ರಮಾಣದಲ್ಲಿ ಲಾಭ ಪಡೆದ ಹಿನ್ನೆಲೆ ಬೆಲೆ ಕಡಿತ ಮಾಡುವುದು ಸಾಧ್ಯವಾಗಿದೆ. ಇದರ ಪ್ರಯೋಜನವನ್ನು ದೇಶದ ರೋಗಿಗಳಿಗೆ ತಲುಪಿಸಲಾಗುತ್ತದೆ" ಎಂದು ಗ್ಲೆನ್‌ಮಾರ್ಕ್ ಹೇಳಿದೆ.
"ನಮ್ಮ ಆಂತರಿಕ ಸಂಶೋಧನೆಯ ಪ್ರಕಾರ ಇತರ ದೇಶಗಳಲ್ಲಿನ ವೆಚ್ಚಕ್ಕೆ ಹೋಲಿಸಿದರೆ ನಾವು ಭಾರತದಲ್ಲಿ ಕಡಿಮೆ ಮಾರುಕಟ್ಟೆ ವೆಚ್ಚ ಹೊಂದಿದ್ದೇವೆ. ಈಗ ಈ ಬೆಲೆ ಕಡಿತವು ರೋಗಿಗಳಿಗೆ ಇನ್ನಷ್ಟು ಉಪಯೋಗವಾಗಲಿದೆ ಎಂದು ನಾವು ಭಾವಿಸುತ್ತೇವೆ" ಎಂದು ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಹಿರಿಯ ಉಪಾಧ್ಯಕ್ಷ ಅಲೋಕ್ ಮಲಿಕ್ ಹೇಳಿದ್ದಾರೆ.