ಕೊಟ್ವಾಲಿ(ಉತ್ತರಪ್ರದೇಶ): ಪ್ರೀತಿಸಲು ನಿರಾಕರಣೆ ಮಾಡಿದ್ದಾಳೆ ಎಂಬ ಕಾರಣಕ್ಕಾಗಿ ಯುವಕನೋರ್ವ 18 ವರ್ಷದ ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಉತ್ತರಪ್ರದೇಶದ ಕೊಟ್ವಾಲಿ ಪೊಲೀಸ್ ಠಾಣೆಯ ಕಾಶಿರಾಮ್ನಲ್ಲಿ ವಾಸ ಮಾಡುತ್ತಿದ್ದ ಯುವತಿ ಸಾವನ್ನಪ್ಪಿದ್ದಾಳೆ. ಮೊಹಮ್ಮದ್ ಉಸ್ಮಾನ್ ಎಂಬ ಯುವಕ ಈ ಕೃತ್ಯವೆಸಗಿದ್ದಾನೆಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಯುವತಿಗೆ ಬೆಂಕಿ ಹಚ್ಚಿ ಕೊಲೆಗೈದ ವ್ಯಕ್ತಿ!? ಕಳೆದ ಎರಡು ವರ್ಷಗಳಿಂದ ಯುವತಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಬುಧವಾರ ಮಧ್ಯಾಹ್ನ ಆಕೆಯ ನಿವಾಸಕ್ಕೆ ತೆರಳಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಆತ ಅಲ್ಲಿಂದ ಹೊರ ಹೋಗಿರುವುದನ್ನ ತಾನು ನೋಡಿರುವುದಾಗಿ ಬಾಲಕಿ ತಾಯಿ ಹೇಳಿದ್ದಾಳೆ. ಇದರ ಮಧ್ಯೆ ಯುವಕನ ಕಿರುಕುಳ ತಾಳಲಾರದೇ ಆಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಮೊಹಮ್ಮದ್ ಉಸ್ಮಾನ್ ಬಂಧನ ಮಾಡಲಾಗಿದ್ದು, ಆತ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ ಎಂದು ತಿಳಿದು ಬಂದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಕಳೆದ ಎರಡು ವರ್ಷಗಳಿಂದ ಇವರು ಪರಸ್ಪರ ಪ್ರೀತಿಸುತ್ತಿದ್ದರು ಎಂಬ ಮಾತು ಕೇಳಿ ಬರುತ್ತಿವೆ.