ಹೈದರಾಬಾದ್: ಕೋವಿಡ್-19 ಸಂಕಷ್ಟವನ್ನು ಎದುರಿಸಲು ಜಗತ್ತು ಒದ್ದಾಡುತ್ತಿರುವ ಈ ಸಂದರ್ಭದಲ್ಲಿ, ಭವಿಷ್ಯದ ಕುರಿತು ಉತ್ತರವಿಲ್ಲದ ಪ್ರಶ್ನೆಗಳು ಹಲವು ಇವೆ. ಆ ಪೈಕಿ ಮಹತ್ವದ ಪ್ರಶ್ನೆ ಇರುವುದು ಈ ಸಾಂಕ್ರಾಮಿಕ ರೋಗವು ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ಭೌಗೋಳಿಕ ರಾಜಕೀಯದ ನಡವಳಿಕೆಗಳ ಮೇಲೆ ಬೀರಬಹುದಾದ ಪರಿಣಾಮದ ಕುರಿತು. ಸಮಾನ ಶತ್ರುವಿನ ವಿರುದ್ಧ ನಡೆದಿರುವ ಈ ಹೋರಾಟವು ಇತ್ತೀಚಿನ ದಿನಗಳಲ್ಲಿ ನಾವೆಲ್ಲ ನೋಡಿರುವುದಕ್ಕಿಂತ ಹೊಸದಾದ ಜಾಗತಿಕ ವ್ಯವಸ್ಥೆಯನ್ನು ಮತ್ತು ಹೆಚ್ಚಿನ ಅಂತಾರಾಷ್ಟ್ರೀಯ ಸಹಕಾರವನ್ನು ಸಾಧ್ಯವಾಗಿಸಬಲ್ಲುದೆ?. ದುರದೃಷ್ಟದ ಸಂಗತಿ ಎಂದರೆ, ಅಂತಹ ಮಹತ್ವದ ಉತ್ತಮ ಬೆಳವಣಿಗೆಯೇನೂ ನಡೆಯದು ಎಂಬುದೇ ಈ ಪ್ರಶ್ನೆಗೆ ಉತ್ತರ.
ಕಳೆದೊಂದು ದಶಕದಿಂದ ಗೋಚರಿಸುತ್ತಿರುವ ಭೌಗೋಳಿಕ ರಾಜಕೀಯ ನಡವಳಿಕೆಗಳಲ್ಲಿ ಒಂದಿಷ್ಟು ವೇಗವನ್ನು ಕಾಣುವ ಸಾಧ್ಯತೆಗಳಿವೆ. ಸಾಂಕ್ರಾಮಿಕ ರೋಗ ವಿಸ್ಫೋಟಗೊಂಡ ಸಂದರ್ಭದಲ್ಲಿ ರಾಷ್ಟ್ರೀಯತೆ ಮತ್ತು “ದೇಶ ಮೊದಲು” ನೀತಿಗಳ ಹೆಚ್ಚಳದಿಂದಾಗಿ ಜಾಗತೀಕರಣವು ಆಗಲೇ ಸಾಕಷ್ಟು ಒತ್ತಡದಲ್ಲಿತ್ತು. ಗಡಿಗಳು ಮುಚ್ಚಲ್ಪಡುತ್ತಿದ್ದವು ಹಾಗೂ ಈಗ ಅವನ್ನು ಭದ್ರವಾಗಿ ಬಂದ್ ಮಾಡಲಾಗಿದೆ. ಸದ್ಯದ ಭವಿಷ್ಯದಲ್ಲಿ ಅವು ಮತ್ತೆ ತೆರೆದುಕೊಳ್ಳುವ ಸಾಧ್ಯತೆಗಳು ಬಲು ಕಡಿಮೆ. ಯುದ್ಧ ಮತ್ತು ಹಿಂಸಾತ್ಮಕ ಕೃತ್ಯಗಳಿಂದ ತಪ್ಪಿಸಿಕೊಳ್ಳಲು ಓಡಿ ಹೋಗುತ್ತಿರುವ ವಲಸಿಗರು ಹಾಗೂ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಉತ್ತಮ ಆರ್ಥಿಕ ಅವಕಾಶಗಳನ್ನು ಹುಡುಕಿಕೊಂಡು ಹೋಗುವ ಜನರ ಮೇಲೆಯೂ ಈ ಬೆಳವಣಿಗೆ ಮಹತ್ವದ ಪರಿಣಾಮ ಬೀರಲಿವೆ.
ಪ್ರಮುಖ ದೇಶಗಳ ಏಕಪಕ್ಷೀಯ ಕ್ರಮಗಳಿಂದಾಗಿ ವಿಶ್ವ ಸಂಸ್ಥೆಯಂತಹ ಬಹು ಆಯಾಮದ ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳು ದುರ್ಬಲವಾಗಿದ್ದು, ತಮ್ಮ ಅಳಿದುಳಿದ ಪ್ರಭಾವವನ್ನೂ ಅವು ಈಗ ಕಳೆದುಕೊಳ್ಳಲಿವೆ. ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯೂಹೆಚ್‌ಒ) ಅಮೆರಿಕ ತನ್ನ ಅನುದಾನವನ್ನು ಸ್ಥಗಿತಗೊಳಿಸಿರುವುದು ಈ ನಿಟ್ಟಿನಲ್ಲಿ ಕೈಗೊಂಡ ಒಂದು ಕ್ರಮ ಮಾತ್ರ. ಇದರ ಮುಂದುವರಿದ ಭಾಗವಾಗಿ ಪ್ಯಾರಿಸ್‌ನ ಹವಾಮಾನ ಒಪ್ಪಂದಿಂದ ಅಮೆರಿಕ ಹಿಂದೆಗೆಯುವುದು, ಯುನೆಸ್ಕೊದಿಂದ ಹೊರಬೀಳುವುದು ಹಾಗೂ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ರಷ್ಯಾ ಹಿಂದೆಗೆಯುವಂತಹ ಕ್ರಮಗಳು ಈ ಸರಣಿಯಲ್ಲಿವೆ. ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ವಿಶ್ವ ಸಂಸ್ಥೆಯ ನ್ಯಾಯಮಂಡಳಿ ಜೊತೆಗೆ ಸಹಕರಿಸಲು ಚೀನಾ ನಿರಾಕರಿಸಿದೆಯಲ್ಲದೇ ಅದರ 2016ರ ತೀರ್ಪನ್ನು ತಿರಸ್ಕರಿಸಿದೆ. ಯುರೋಪ್ ಒಕ್ಕೂಟದಂತಹ ಬಲಾಢ್ಯ ಆರ್ಥಿಕ ಒಕ್ಕೂಟ ಸಹ ಇಟಲಿಯಂತಹ ಸದಸ್ಯ ದೇಶಕ್ಕೆ ನೆರವು ನೀಡುವುದಕ್ಕೆ ಸಂಬಂಧಿಸಿದಂತೆ ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸಲು ಕಾಯ್ದು ನೋಡುತ್ತಿರುವ ಪರಿಸ್ಥಿತಿಯಿದೆ.
ಅಂತಾರಾಷ್ಟ್ರೀಯ ಸಂಬಂಧಗಳಿಗೆ ಸಂಬಂಧಿಸಿದಂತೆ ಉದಾರವಾದ ಸಿದ್ಧಾಂತ ಎಂಬುದು ನಶಿಸಿಹೋಗುತ್ತಿರುವ ದಾರಿಯೇ ಎಂಬುದರ ಕುರಿತು ಕಳೆದ ಕೆಲವು ವರ್ಷಗಳಿಂದ ಸಕ್ರಿಯ ಚರ್ಚೆಯೊಂದು ನಡೆಯುತ್ತ ಬಂದಿದೆ. ಜಗತ್ತಿನಲ್ಲಿ ಹೆಚ್ಚು ಶಾಂತಿ ನೆಲೆಸಲು ಕಾರಣವಾಗಿದ್ದ ಪ್ರಜಾಪ್ರಭುತ್ವ ವ್ಯವಸ್ಥೆ, ಅಂತಾರಾಷ್ಟ್ರೀಯ ಸಂಸ್ಥೆಗಳು ಹಾಗೂ ಆರ್ಥಿಕ ಸ್ವಾತಂತ್ರ್ಯ ಈಗ ಹೆಚ್ಚು ಒತ್ತಡಕ್ಕೆ ಸಿಲುಕಿವೆ. ಇನ್ನೊಂದೆಡೆ, ವಾಸ್ತವ ಸಿದ್ಧಾಂತವು ಈಗಿನ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಅರಾಜಕತೆಯಾಗಿ ಮತ್ತು ಸಾರ್ವಭೌಮ ದೇಶಗಳನ್ನು ಪ್ರಮುಖ ನಟರು ಎಂಬಂತೆ ನೋಡುತ್ತದೆ. ಜಾಗತಿಕವಾಗಿ ಪ್ರಮುಖ ಅನುಪಸ್ಥಿತಿಯಲ್ಲಿ ಪ್ರತಿಯೊಂದು ದೇಶವೂ ತಮ್ಮ ಅಧಿಕಾರವನ್ನು ಹೆಚ್ಚಿಸಿಕೊಳ್ಳಲು ಹವಣಿಸುತ್ತಿವೆ.
ಇವತ್ತು ಜಗತ್ತಿನ ಸುತ್ತಮುತ್ತ ಅವಲೋಕಿಸುತ್ತಾ, ಕೋವಿಡ್ ನಂತರದ ಭವಿಷ್ಯದತ್ತ ನಾವು ಇಣುಕಿ ನೋಡಲು ಪ್ರಯತ್ನಿಸಿದರೆ, ಪ್ರಾದೇಶಿಕ ಹಾಗೂ ಜಾಗತಿಕ ಮಟ್ಟಗಳಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ತೀವ್ರಗೊಳ್ಳಲು ವೇದಿಕೆ ಸಿದ್ಧವಾಗಿರುವ ದೃಶ್ಯವೇ ಸ್ಪಷ್ಟವಾಗಿ ಕಂಡುಬರುತ್ತದೆ. ಕುಸಿಯುತ್ತಿರುವ ತೈಲ ಬೆಲೆಗಳ ತೀವ್ರ ಆರ್ಥಿಕ ಪರಿಣಾಮದಿಂದಾಗಿ ಇರಾನ್ ಮತ್ತು ಇರಾಕ್‌ನಂತಹ ದೇಶಗಳು ದುರ್ಬಲವಾಗುತ್ತವೆ. ಇದರಿಂದ ಆ ಪ್ರದೇಶದಲ್ಲಿ ತೀವ್ರಮಟ್ಟದ ಅಸ್ಥಿರತೆ ತಲೆದೋರುತ್ತದೆ. ವೈರಸ್ ಉಂಟು ಮಾಡುವ ಶಕ್ತಿಗುಂದಿಸುವ ಪರಿಣಾಮವನ್ನು ಎದುರಿಸುವುದಕ್ಕೆ ಬೇಕಾದ ಆರೋಗ್ಯ ಮೂಲಸೌಕರ್ಯಗಳ ಕೊರತೆ ಇರುವ ದೇಶಗಳಲ್ಲಿ ಇದು ಭಯೋತ್ಪಾದನೆ ಮತ್ತು ದೊಡ್ಡ ಮಟ್ಟದ ತೀವ್ರವಾದಕ್ಕೂ ದಾರಿ ಮಾಡಿಕೊಡಬಹುದು.
ದೊಡ್ಡ ಮಟ್ಟದ ಅಧಿಕಾರಕ್ಕಾಗಿ ನಡೆಯುವ ಕಿತ್ತಾಟ ತೀವ್ರಗೊಳ್ಳಲಿದೆ. ವೈರಸ್ ಕುರಿತ ಮಾಹಿತಿಯನ್ನು ಚೀನಾ ಮುಚ್ಚಿಡುತ್ತಿದೆ; ಒಂದು ವೇಳೆ ಗೊತ್ತಿದ್ದೂ ಈ ಸಾಂಕ್ರಾಮಿಕ ರೋಗ ಹರಡಲು ಅದು ಜವಾಬ್ದಾರಿಯಾಗಿದ್ದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಅಧ್ಯಕ್ಷ ಟ್ರಂಪ್ ನಡೆಸಿರುವ ವಾಗ್ಯುದ್ಧಗಳನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. ಇದಕ್ಕೆ ಉತ್ತರವಾಗಿ ದೊಡ್ಡ ಮಟ್ಟದ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿರುವ ಚೀನಾ, ತಾನು ವೈರಸ್ಅನ್ನು ನಿಯಂತ್ರಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿದೆ. ಜೊತೆಗೆ, ಯುರೋಪ್, ಆಫ್ರಿಕಾ ಮತ್ತು ಏಷ್ಯದ ದೇಶಗಳಿಗೆ ವೈದ್ಯಕೀಯ ನೆರವು ನೀಡುವ ಮೂಲಕ ಪರೋಕ್ಷವಾಗಿ ತನ್ನ ಪ್ರಭಾವವನ್ನು ವೃದ್ಧಿಸಿಕೊಳ್ಳುವ ಪ್ರಯತ್ನಗಳನ್ನು ನಡೆಸುತ್ತಿದೆ.