ಹೈದರಾಬಾದ್ : ಕಳೆದ 15 ವರ್ಷಗಳ ಹಿಂದೆ ತೆಲಂಗಾಣದಿಂದ ನಾಪತ್ತೆಯಾಗಿ, ಆಕಸ್ಮಿಕವಾಗಿ ಪಾಕಿಸ್ತಾನ ಸೇರಿದ್ದ ಯುವತಿಯೊಬ್ಬಳು ಕೊನೆಗೂ ತನ್ನ ಪೋಷಕರನ್ನು ಸೇರಿದ್ದಾಳೆ.
ಯಾರೂ ಈ ಗೀತಾ..?
ಮಹಾರಾಷ್ಟ್ರದ ಗಡಿ ಭಾಗ ತೆಲಂಗಾಣದ ಬಸಾರಾ ನಗರದ ಏಕಯ್ಯ ಮತ್ತು ಶಾಂತಾ ದಂಪತಿಗೆ 2000 ಇಸವಿಯಲ್ಲಿ ಮಗಳು ಜನಿಸಿದ್ದಳು. ಅವಳಿಗೆ ಬಾಲ್ಯದಲ್ಲಿ ಸೌಜನ್ಯ ಎಂದು ಹೆಸರಿಡಲಾಗಿತ್ತು. ಹುಡುಗಿ ಬಾಲ್ಯದಿಂದಲೂ ಕಿವುಡಿ ಮತ್ತು ಮೂಗಿಯಾಗಿದ್ದಳು. 2005 ರಲ್ಲಿ ಏಕಯ್ಯ ಕುಟುಂಬ ಹೈದರಾಬಾದ್ಗೆ ಬಂದು ನೆಲೆಸುತ್ತದೆ. ಮಗಳು 6 ವರ್ಷದವಳಿದ್ದಾಗ ಒಂದು ದಿನ ದಂಪತಿ ಕೆಲಸಕ್ಕೆಂದು ಹೊರಗೆ ಹೋಗಿದ್ದರು. ಮರಳಿ ಮನೆಗೆ ಬಂದಾಗ ಮಗಳು ಕಾಣೆಯಾಗಿದ್ದಳು.
ದಂಪತಿ ಮಗಳನ್ನು ಎಷ್ಟೇ ಹುಡುಕಿದರೂ, ಆಕೆ ಮಾತ್ರ ಪತ್ತೆಯಾಗಿರಲಿಲ್ಲ. ಬಳಿಕ ದಂಪತಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಅಷ್ಟೊತ್ತಿಗಾಗಲೇ, ಗೀತಾ ( ಸೌಜನ್ಯ) ಮನೆಯ ಸಮೀಪದಿಂದ ಹಾದು ಹೋಗುತ್ತಿದ್ದ ಸಂಜೋತ ಎಕ್ಸ್ ಪ್ರೆಸ್ ರೈಲು ಹತ್ತಿ ಪಂಜಾಬ್ನ ಅಮೃತಸರ್ ಮೂಲಕ ದೂರದ ಪಾಕಿಸ್ತಾನ ತಲುಪಿದ್ದಳು. ಹೀಗೆ ಪಾಕ್ ನೆಲ ತಲುಪಿದ ಗೀತಾ, ಕೊನೆಗೆ ಕರಾಚಿಯ ಎದಿ ಫೌಂಡೇಶನ್ ಎಂಬ ಸ್ವಯಂ ಸೇವ ಸಂಘ ಸೇರುತ್ತಾಳೆ. ಅಲ್ಲಿ ಆಕೆಯ ಹೆಸರನ್ನು ಫಾತಿಮ ಎಂದು ಬದಲಾಯಿಸಲಾಗುತ್ತದೆ. ಆದರೆ, ಆಕೆಗೆ ನಮಾಜ್ ಮಾಡಲು ಬರದ ಕಾರಣ ಕೆಲವೇ ದಿನಗಳಲ್ಲಿ ಆಕೆಯ ಹೆಸರನ್ನು ಗೀತಾ ಎಂದು ಬದಲಾಯಿಸಲಾಗುತ್ತದೆ. ಈ ಮೂಲಕ ಬಾಲ್ಯದಲ್ಲಿ ಸೌಜನ್ಯ ಆಗಿದ್ದ ಹುಡುಗಿ ಗೀತಾ ಆಗಿ ಬದಲಾಗ್ತಾಳೆ.