ನವದೆಹಲಿ:2018-19ರ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯ ವೇಗ ಶೇ. 6.1 ರಷ್ಟು ಇರಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಹಿಂದೆ ಆ ವರ್ಷದಲ್ಲಿ ಜಿಡಿಪಿ ಶೇ. 6.8 ಅಭಿವೃದ್ಧಿ ಹೊಂದಿರಬಹುದು ಎಂದು ಸರ್ಕಾರ ಅಂದಾಜಿಸಿತ್ತು. ಈಗ ವಿವಿಧ ಕಾರಣಗಳಿಂದಾಗಿ ಆ ದರವನ್ನು ಪರಿಷ್ಕರಿಸಿದೆ.
ಗಣಿಗಾರಿಕೆ, ಕೃಷಿ, ತಯಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಬೆಳವಣಿಗೆ ಕುಂಠಿತಗೊಂಡಿದ್ದರಿಂದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಶುಕ್ರವಾರ ಬಿಡುಗಡೆ ಮಾಡಿದ ಪರಿಷ್ಕೃತ ನ್ಯಾಷನಲ್ ಅಕೌಂಟ್ ಮಾಹಿತಿಯಲ್ಲಿ ಈ ಅಂಶ ಸ್ಪಷ್ಟವಾಗಿದೆ. “ನೈಜ ಜಿಡಿಪಿ ಪ್ರಮಾಣವು 2018-19ರ ಸಾಲಿನಲ್ಲಿ 139.81 ಲಕ್ಷ ಕೋಟಿ ಇದೆ. 2017-18ರ ಸಾಲಿನಲ್ಲಿ 131.75 ಲಕ್ಷ ಕೋಟಿ ಇತ್ತು ಎಂದು ಪರಿಷ್ಕೃತ ವರದಿಯಲ್ಲಿ ಅಂಕಿ ಅಂಶ ನೀಡಲಾಗಿದೆ.
2017ಕ್ಕೆ ಹೋಲಿಸಿದರೆ 2018ರಲ್ಲಿ ಜಿಡಿಪಿ ಅಭಿವೃದ್ಧಿ ಕಡಿಮೆಯಾಗಲು ವಿವಿಧ ವಲಯಗಳ ಕುಂಠಿತ ಬೆಳವಣಿಗೆಯೇ ಕಾರಣವೆಂದು ಗ್ರಹಿಸಲಾಗಿದೆ. ಕೃಷಿ, ಅರಣ್ಯ, ಮೀನುಗಾರಿಕೆ, ಗಣಿಗಾರಿಕೆ, ತಯಾರಿಕೆ, ವಿದ್ಯುತ್, ಅನಿಲ, ಜಲ ಪೂರೈಕೆ, ಹಣಕಾಸು ಸೇವೆ, ಸಾರ್ವಜನಿಕ ಆಡಳಿತ, ರಕ್ಷಣಾ ಇತ್ಯಾದಿ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿಯಾಗಿಲ್ಲದಿರುವುದು ಜಿಡಿಪಿಯ ಬೆಳವಣಿಗೆಗೆ ತಡೆಗೋಡೆ ಆಗಿತ್ತು ಎನ್ನಲಾಗಿದೆ.