ಗಯಾ (ಬಿಹಾರ): ಖಚಿತ ಮಾಹಿತಿ ಮೇರೆಗೆ ಗಯಾ ಪೊಲೀಸರು ಇಲ್ಲಿನ ಖಾಸಗಿ ಅತಿಥಿಗೃಹವೊಂದರಲ್ಲಿ ಅಂತಾರಾಜ್ಯ ಆನ್‌ಲೈನ್ ವಂಚಕರ ಗ್ಯಾಂಗ್ವೊಂದನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟು16 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಯುವಕರಲ್ಲಿ 9 ಯುವಕರು ಕರ್ನಾಟಕದವರು. ಇದೇ ಸಮಯದಲ್ಲಿ ಪೊಲೀಸರು ಗ್ಯಾಂಗ್ ಲೀಡರ್ ರೋಶನ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಇಂಜಿನಿಯರಿಂಗ್ ಅಧ್ಯಯನವನ್ನು ಮೊಟಕುಗೊಳಿಸಿ ಹಣಗಳಿಕೆಗೆ ಅಡ್ಡದಾರಿ ಕಂಡುಕೊಂಡು ಗ್ಯಾಂಗ್ ಮೂಲಕ ಆನ್‌ಲೈನ್ ವಂಚನೆ ಕೃತ್ಯ ಎಸಗುತ್ತಿದ್ದನು.
ಈ ತಂಡ ಸುಮಾರು ಒಂದು ತಿಂಗಳಿಂದ ಬೋಧ್ ಗಯಾ ಪ್ರದೇಶದಲ್ಲಿ ಸಕ್ರಿಯವಾಗಿತ್ತು. ತಮ್ಮ ರಹಸ್ಯ ಕಾರ್ಯಾಚರಣೆಗಳನ್ನು ಖಾಸಗಿ ಹೊಟೇಲ್ ಒಂದರಲ್ಲಿ ಕುಳಿತು ಮಾಡುತ್ತಿದ್ದರು. ವಂಚಕರು ಹೊಟೇಲ್ನ ಕೋಣೆಯಲ್ಲಿ ಪಾರ್ಟಿ ಮಾಡುತ್ತಿದ್ದ ಸಂದರ್ಭ ಪೊಲೀಸರು ದಾಳಿ ಮಾಡಿ 16 ಮಂದಿಯನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ತಂಡದ ಮುಖ್ಯ ಗುರಿ ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣದ ಗ್ರಾಹಕರು. ಆನ್‌ಲೈನ್ ಲಾಟರಿ ಆಮಿಷವೊಡ್ಡುತ್ತಿದ್ದ ತಂಡ ಆಯಾ ರಾಜ್ಯದವರೊಂದಿಗೆ ಅವರದೇ ಭಾಷೆಯಲ್ಲಿ ವ್ಯವಹರಿಸುವ ತಂಡವನ್ನು ಸಜ್ಜುಗೊಳಿಸಿತ್ತು.
ಇನ್ನು ಬಂಧಿತರಿಂದ ಗಾಂಜಾ, 2 ಕೆಜಿ ನಕಲಿ ಚಿನ್ನ, 24 ಸ್ಮಾರ್ಟ್ ಫೋನ್ಗಳು, ಮೂರು ಬೈಕ್ಗಳು, ದುಬಾರಿ ವಾಚ್, ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.