ನವದೆಹಲಿ: ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಶುರು ಮಾಡುವ ಸಾಧ್ಯತೆ ದಟ್ಟವಾಗಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಟೀಂ ಇಂಡಿಯಾದ ಮಾಜಿ ಆಟಗಾರ ಗಂಭೀರ್, ಬಿಜೆಪಿ ಟಿಕೆಟ್ ಪಡೆದು ದೆಹಲಿ ಲೋಕಸಭಾ ಕ್ಷೇತ್ರವೊಂದರಿಂದ ತಮ್ಮ ರಾಜಕೀಯ ಅದೃಷ್ಟ ಪರೀಕ್ಷಿಗಿಳಿಯಲಿದ್ದಾರಂತೆ.
ಈಗಾಗಲೇ ರಾಜಧಾನಿ ನವದೆಹಲಿ ಹಾಗೂ ರಾಷ್ಟ್ರಕ್ಕೆ ಸಂಬಂಧಿಸಿದ ಸಾಕಷ್ಟು ವಿಷಯಗಳ ಮೇಲೆ ಗಂಭೀರ ಧ್ವನಿ ಎತ್ತಿದ್ದಾರೆ. ತಮ್ಮ ಅಭಿಪ್ರಾಯಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಈಗ ಮಾಜಿ ಕ್ರಿಕೆಟರ್‌ಗೆ ಟಿಕೆಟ್ ಕೊಟ್ಟು ಅಖಾಡಕ್ಕಿಳಿಸುವ ಬಗ್ಗೆ ಭಾರತೀಯ ಜನತಾ ಪಕ್ಷ ಉತ್ಸುಕತೆ ತೋರಿಸಿದೆ. ಸುಪ್ರೀಂಕೋರ್ಟ್ ವಕೀಲೆ, ಹಾಲಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಪ್ರತಿನಿಧಿಸುವ ಸಂಸತ್ ಕ್ಷೇತ್ರದಿಂದಲೇ ಗಂಭೀರ್ ಅವರನ್ನ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಗಂಭೀರವಾಗಿ ಚಿಂತನೆ ನಡೆಸಿದೆ.