ನವದೆಹಲಿ:ಕೋವಿಡ್-19 ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಮೇ 3 ವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರ ನೆರವಿಗೆ ಕೇಂದ್ರ ಕಾರ್ಮಿಕ ಸಚಿವರು ಧಾವಿಸಿದ್ದಾರೆ.
ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದ್ದು, ಇಲ್ಲಿನ ಸಿಬ್ಬಂದಿಯೊಂದಿಗೆ ಸಮನ್ವಯತೆ ಸಾಧಿಸುವಂತೆ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ನೋಡಲ್ ಅಧಿಕಾರಿಗಳಿಗೆ ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಸೂಚಿಸಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿರುವ ಸಚಿವರು, ಮೂರನೇ ಎರಡಷ್ಟು ಭಾಗ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ದೂರುಗಳೇ ಬರುತ್ತಿವೆ. ಹೀಗಾಗಿ ರಾಜ್ಯಗಳ ಆಯಾ ಕಾರ್ಮಿಕ ಇಲಾಖೆಗಳ ಅಧಿಕಾರಿಗಳು ಕುಂದುಕೊರತೆಗಳನ್ನು ತಗ್ಗಿಸಲು ಸಹಕರಿಸುವಂತೆ ಕೋರಿದ್ದಾರೆ. ವಲಸೆ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ 20 ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ.
ಲಾಕ್‌ಡೌನ್ ವಿಸ್ತರಿಸಿದ ದಿನದಿಂದ ನಿನ್ನೆಯವರೆಗೆ 2,100 ದೂರುಗಳು ಬಂದಿದ್ದು, ಇದರಲ್ಲಿ 1400 ದೂರುಗಳು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿವೆ ಎಂದು ಸಚಿವರು ಹೇಳಿದ್ದಾರೆ.