ಫರಿದಾಬಾದ್ (ಹರ್ಯಾಣ): ಫರಿದಾಬಾದ್‌ನ ಹೋಟೆಲ್‌ನಿಂದ ವ್ಯಕ್ತಿಯೊಬ್ಬನ್ನು ಪೊಲೀಸರು ಬಂಧಿಸಿದ್ದು, ಆತ ಯುಪಿಯ ಕುಖ್ಯಾತ ದರೋಡೆಕೋರ ವಿಕಾಸ್ ದುಬೆ ಅವರ ಗ್ಯಾಂಗ್ ಸದಸ್ಯ ಎಂದು ಮೂಲಗಳಿಂದ ವರದಿಯಾಗಿದೆ.
ದರೋಡೆಕೋರ ವಿಕಾಸ್ ದುಬೆ ಫರಿದಾಬಾದ್‌ನ ಹೋಟೆಲ್‌ವೊಂದರಲ್ಲಿ ಅಡಗಿ ಕುಳಿತಿದ್ದಾನೆ ಎಂಬ ಸುದ್ದಿ ಪೊಲೀಸರಿಗೆ ಬಂದಿತ್ತು. ಫರಿದಾಬಾದ್‌ನ ಹೋಟೆಲ್‌ವೊಂದರ ಮೇಲೆ ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ವಿಕಾಸ್ ದುಬೆ ಕಂಡುಬಂದಿಲ್ಲ. ಆದರೆ, ಪೊಲೀಸರು ಬೇರೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ದರೋಡೆಕೋರ ವಿಕಾಸ್ ದುಬೆ ಕೂಡ ಅಲ್ಲಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.
ಮಾಹಿತಿಯ ಪ್ರಕಾರ, ಈ ಫರಿದಾಬಾದ್ ಹೋಟೆಲ್‌ನಲ್ಲಿ ದರೋಡೆಕೋರ ವಿಕಾಸ್ ದುಬೆ ಅವರ ಸಂಬಂಧಿಯ ಹೆಸರಿನಲ್ಲಿ ಒಂದು ಕೊಠಡಿ ಕಾಯ್ದಿರಿಸಲಾಗಿದೆ.
ಸಿಸಿಟಿವಿಯನ್ನು ವಶಪಡಿಸಿಕೊಂಡಿದ್ದ ಪೊಲೀಸರು:
ಈ ಸಂದರ್ಭದಲ್ಲಿ ಪೊಲೀಸರು ಇಡೀ ಹೋಟೆಲ್ ಪರಿಶೀಲಿಸಿದ್ದು, ಹೋಟೆಲ್ ಸಿಬ್ಬಂದಿಯನ್ನ ಪ್ರಶ್ನಿಸಿದ್ದಾರೆ. ಪೊಲೀಸರು ಹೋಟೆಲ್‌ನ ಸಿಸಿಟಿವಿ ತೆಗೆದುಕೊಂಡಿದ್ದಾರೆ. ಬರ್ಖಾಲ್ ಚೌಕ್‌ನ ಈ ಓಯೋ ಹೋಟೆಲ್‌ಗೆ ಸುಮಾರು 30ರಿಂದ 35 ಜವಾನರು ಮತ್ತು ಅಧಿಕಾರಿಗಳು ಸರಳ ಸಮವಸ್ತ್ರದಲ್ಲಿ ಆಗಮಿಸಿದ್ದರು.
ದುಬೆ ಬಂಧನಕ್ಕೆ 40 ತಂಡಗಳ ರಚನೆ:
ವಿಕಾಸ್ ದುಬೆ ಸೆರೆಹಿಡಿಯಲು 40 ಪೊಲೀಸ್ ತಂಡಗಳನ್ನ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪೊಲೀಸರು ಕಾನ್ಪುರದ ಸುತ್ತಮುತ್ತಲಿನ ಪ್ರದೇಶದಲ್ಲಿ ತನಿಖೆ ನಡೆಸುತ್ತಿದ್ದಾರೆ. ಯುಪಿ- ಎಂಪಿ ಗಡಿ, ಯುಪಿ - ನೇಪಾಳ ಗಡಿಯ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ. ಕಾನ್ಪುರದಿಂದ ಹೊರಡುವ ಎಲ್ಲ ಹೆದ್ದಾರಿಗಳು ಮತ್ತು ರಸ್ತೆಗಳಲ್ಲಿ ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದಾರೆ. ಪ್ರತಿದಿನ ಪೊಲೀಸರು ಟೋಲ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ. ಆದರೆ ವಿಕಾಸ್ ದುಬೆಯ ಯಾವುದೇ ಸುಳಿವು ಕಂಡುಬಂದಿಲ್ಲ.
8 ಪೊಲೀಸರನ್ನು ಕೊಂದ ದರೋಡೆಕೋರ ವಿಕಾಸ್ ದುಬೆ:
ವಿಕಾಸ್ ದುಬೆ ಅವರ ಮನೆಯ ಮೇಲೆ ದಾಳಿ ಮಾಡಲು ಹೋದ ಪೊಲೀಸ್ ತಂಡದ ಮೇಲೆ ವಿಕಾಸ್ ದುಬೆ ಮತ್ತು ಅವರ ಸಹಚರರು ತೀವ್ರವಾಗಿ ಗುಂಡು ಹಾರಿಸಿದ್ದರು. ಇದರಿಂದಾಗಿ ಡೆಪ್ಯೂಟಿ ಎಸ್‌ಪಿ ಸೇರಿದಂತೆ 8 ಪೊಲೀಸರು ಹುತಾತ್ಮರಾಗಿದ್ರು. ವಿಕಾಸ್ ದುಬೆಗೆ ಪೊಲೀಸರು ಬರುತ್ತಿರುವುದು ಮೊದಲೇ ತಿಳಿದಿತ್ತು ಎಂದು ಹೇಳಲಾಗುತ್ತಿದೆ. ಪೊಲೀಸರು ಅಲ್ಲಿಗೆ ತಲುಪಿದಾಗ, ವಿಕಾಸ್ ದುಬೆ ಮತ್ತು ಅವರ ಸಹಚರರು ಗುಂಡು ಹಾರಿಸಲು ಸಂಪೂರ್ಣವಾಗಿ ಸಿದ್ಧರಾಗಿದ್ದರು. ಪೊಲೀಸರು ಅಲ್ಲಿಗೆ ಬಂದ ಕೂಡಲೇ ಅವರು ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಲಾರಂಭಿಸಿದರು.
ಚೌಬೆಪುರ ಪೊಲೀಸ್ ಠಾಣೆಯಲ್ಲಿ ವಿಕಾಸ್ ದುಬೆ ವಿರುದ್ಧ ಪ್ರಕರಣ:
ಕಾನ್ಪುರದ ಚೌಬೆಪುರ ಪೊಲೀಸ್ ಠಾಣೆಯಲ್ಲಿ ವಿಕಾಸ್ ದುಬೆ ವಿರುದ್ಧ 8 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಕೊಲೆ ಮತ್ತು ಕೊಲೆ ಯತ್ನದಂತಹ ಅನೇಕ ಗಂಭೀರ ಪ್ರಕರಣಗಳಿವೆ. ವಿಕಾಸ್ ದುಬೆ ಕಳೆದ ಮೂರು ದಶಕಗಳಿಂದ ಅಪರಾಧ ಪ್ರಪಂಚದೊಂದಿಗೆ ಸಂಬಂಧ ಹೊಂದಿದ್ದಾನೆ. ಆತನನ್ನು ಹಲವಾರು ಬಾರಿ ಬಂಧಿಸಲಾಗಿತ್ತು ಆದರೆ, ಯಾವುದೇ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರಲಿಲ್ಲ.
ವಿಕಾಸ್ ದುಬೆ ಮೇಲಿರುವ ಪ್ರಮುಖ ಆರೋಪಗಳು:
- 2000ದಲ್ಲಿ ಕಾನ್ಪುರದ ಶಿವ್ಲಿ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ತಾರಚಂದ್ ಇಂಟರ್ ಕಾಲೇಜಿನ ಸಹಾಯಕ ವ್ಯವಸ್ಥಾಪಕ ಸಿದ್ಧೇಶ್ವರ ಪಾಂಡೆ ಅವರ ಹತ್ಯೆಯಲ್ಲಿ ವಿಕಾಸ್ ದುಬೆ ವಿರುದ್ಧ ಪ್ರಕರಣ ದಾಖಲಾಗಿದೆ.
- 2000ರಲ್ಲಿ ವಿಕಾಸ್ ದುಬೆ ರಂಬಾಬು ಯಾದವ್ ಹತ್ಯೆಯಲ್ಲಿ ಸಂಚು ರೂಪಿಸಿದನೆಂದು ಆರೋಪಿಸಲಾಗಿದೆ.
- ವಿಕಾಸ್ ದುಬೆ 2004ರಲ್ಲಿ ಕೇಬಲ್ ಉದ್ಯಮಿ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ.
- 2001ರಲ್ಲಿ ವಿಕಾಸ್ ದುಬೆ ಮೆಲೆ ಅಂದಿನ ಯುಪಿ ರಾಜ್ಯ ಸಚಿವ ಸಂತೋಷ್ ಶುಕ್ಲಾ ಅವರನ್ನು ಪೊಲೀಸ್ ಠಾಣೆಯೊಳಗೆ ಪ್ರವೇಶಿಸಿ ಕೊಂದ ಆರೋಪ ಹೊರಿಸಲಾಗಿತ್ತು.
- 2018ರಲ್ಲಿ ವಿಕಾಸ್ ದುಬೆ ಮೇಲೆ ತನ್ನ ಸೋದರ ಸಂಬಂಧಿ ಅನುರಾಗ್ ಅವರನ್ನು ಕೊಂದ ಆರೋಪವಿದೆ.