ಲಕ್ನೋ (ಉತ್ತರ ಪ್ರದೇಶ):ಕಾನ್ಪುರದಲ್ಲಿ ಎಂಟು ಪೊಲೀಸರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಮೋಸ್ಟ್ ವಾಂಟೆಡ್ ದರೋಡೆಕೋರ ವಿಕಾಸ್ ದುಬೆಯನ್ನು ಬಂಧಿಸುವ ಪ್ರಯತ್ನವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಆರೋಪಿ ದುಬೆ ರಾಜ್ಯ ಬಿಟ್ಟು ಹೋಗದಂತೆ ತಡೆಯಲು ಗಡಿ ಭಾಗದಲ್ಲಿ ತೀವ್ರ ನಿಗಾ ಇಡಲಾಗಿದೆ. ಅಕ್ಕಪಕ್ಕದ ರಾಜ್ಯಗಳಿಗೂ ಪೊಲೀಸರು ಮಾಹಿತಿ ನೀಡಿದ್ದು, ದುಬೆ ಎಲ್ಲಿಯಾದರೂ ತಲೆಮರೆಸಿಕೊಂಡಿರುವ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಯುಪಿ-ನೇಪಾಳ ಗಡಿ ಭಾಗ ಸೇರಿದಂತೆ ಎಲ್ಲಾ ಕಡೆ ಆತನ ಭಾವಚಿತ್ರವಿರುವ ಪೋಸ್ಟರ್ ಹಾಕಲಾಗಿದೆ.
ಅಧಿಕೃತ ಮೂಲಗಳ ಪ್ರಕಾರ, ಪಿಲಿಭಿತ್ ಜಿಲ್ಲೆಯ ಕಳ್ಳ ದಾರಿಯ ಮೂಲಕ ನೇಪಾಳಕ್ಕೆ ಪರಾರಿಯಾಗಲು ದುಬೆ ಪ್ರಯತ್ನ ನಡೆಸುತ್ತಿದ್ದು, ಇದನ್ನು ತಡೆಯಲು ಪೊಲೀಸರು ಭಾರತ-ನೇಪಾಳ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. ಗಡಿ ಭಾಗದ ರಸ್ತೆಗಳನ್ನು ಸೀಲ್ ಡೌನ್ ಮಾಡಿರುವ ಪೊಲೀಸರು, ಜನರು ಮತ್ತು ವಾಹನಗಳ ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ಪಿಲಿಭಿತ್ ಪೊಲೀಸ್ ವರಿಷ್ಠಾಧಿಕಾರಿ ಜೈ ಪ್ರಕಾಶ್ ಯಾದವ್ ತಿಳಿಸಿದ್ದಾರೆ.
ಇದರ ಜೊತೆಗೆ ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಕೂಡ ತನ್ನ ಗಡಿ ಭದ್ರತಾ ಸಿಬ್ಬಂದಿಯನ್ನು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ದುಬೆ ಗಡಿ ಮೂಲಕ ಬಂದರೆ ಪತ್ತೆ ಹಚ್ಚುವ ಸಲುವಾಗಿ ಆತನ ಭಾವಚಿತ್ರವನ್ನು ಸಿಬ್ಬಂದಿಗೆ ಕಳುಹಿಸಿದ್ದೇವೆ ಎಂದು 49ನೇ ಬೆಟಾಲಿಯನ್‌ನ ಡೆಪ್ಯೂಟಿ ಕಮಾಂಡೆಂಟ್ ರಾಮಣ್ ಸಿಂಗ್ ಹೇಳಿದ್ದಾರೆ.