ಶಾಮಲಿ(ಉತ್ತರ ಪ್ರದೇಶ): ಇಲ್ಲಿನ ಶಾಮಲಿ ಜಿಲ್ಲೆಯ ಜಿಂಜಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಭಾನುವಾರ ಯುವತಿಯೊಬ್ಬಳು ಹೊಲಕ್ಕೆ ಗೊಬ್ಬರ ಹಾಕಲು ಹೊರಟಿದ್ದ ವೇಳೆ ಆಕೆಯನ್ನು ಎಳೆದೊಯ್ದು, ಮೂವರು ಕಾಮುಕರು ಅಟ್ಟಹಾಸ ಮೆರೆದಿದ್ದಾರೆ.
ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ಎಸ್ಪಿ ಮಾಹಿತಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಬಳಿಕ ಕಾಮಕರು ಆಕೆಯನ್ನು ಥಳಿಸಿದ್ದಾರೆ. ಸಂತ್ರಸ್ತೆ ಕುಟುಂಬದ ದೂರಿನ ಆಧಾರದ ಮೇಲೆ ಮೂವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಅತ್ಯಾಚಾರಕ್ಕೊಳಗಾಗಿ ಗಾಯಗೊಂಡ ಯುವತಿ ಮನೆ ತಲುಪಿ ತಾಯಿಗೆ ವಿಷಯ ತಿಳಿಸಿದ್ದಾಳೆ. ನಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಘಟನೆಯ ವಿವರ ಕಲೆಹಾಕಿ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಾಮೂಹಿಕ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಮಾಹಿತಿಯೊಂದು ಲಭ್ಯವಾಗಿದ್ದು, 6 ತಿಂಗಳ ಹಿಂದೆ ಇಬ್ಬರು ಯುವಕರು ಮನೆಗಳಿಗೆ ನುಗ್ಗಿ ಯುವತಿಯರನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ವಿವಾಹವಾಗಿದ್ದರು. ಹೀಗಾಗಿ 2 ಗುಂಪುಗಳ ನಡುವೆ ಈ ಸಂಬಂಧ ವಿವಾದ ಉಂಟಾಗಿತ್ತು. ಘಟನೆ ಸಂಬಂಧ ಸಂತ್ರಸ್ತ ಯುವತಿಯ ತಂದೆ ಸೇರಿ 10 ಗ್ರಾಮಸ್ಥರು ಯುವಕರ ವಿರುದ್ಧ ದೂರು ದಾಖಲಿಸಿದ್ದರು ಎನ್ನಲಾಗ್ತಿದೆ. ಈ ಹಿನ್ನೆಲೆ ಜೈಲು ಸೇರಿದ್ದ ಯುವಕರ ಗುಂಪಿನವರು ಈ ದೃಷ್ಕೃತ್ಯ ಎಸಗಿರಬಹುದೆಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತ್ಯಾನಂದ್ ರೈ, ಘಟನೆ ಸಂಬಂಧ ಮೂವರ ವಿರುದ್ಧ ದೂರು ದಾಖಲಾಗಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಸಂತ್ರಸ್ತೆಯ ವೈದ್ಯಕೀಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.