ಹೈದರಾಬಾದ್: ಜಾಗತಿಕ ಶಾಂತಿ ಎಂದರೆ ಜಗತ್ತಿನ ವಿವಿಧ ರಾಷ್ಟ್ರಗಳ ನಡುವಿನ ಪರಸ್ಪರ ಸಹಕಾರ. ಸ್ವಯಂಪ್ರೇರಿತವಾಗಿ ಯುದ್ಧವನ್ನು ತಡೆಗಟ್ಟಿ ಜವಾಬ್ದಾರಿಯುತವಾಗಿ ವರ್ತಿಸುವ ಮೂಲಕ ಅಹಿಂಸಾ ಮಾರ್ಗವನ್ನು ರಾಷ್ಟ್ರಗಳು ಅನುಸರಿಸುವುದೇ ಮಾಹಾತ್ಮಾ ಗಾಂಧಿ ಕಲ್ಪನೆಯ 'ಜಾಗತಿಕ ಶಾಂತಿ'.
ಜಗತ್ತಿನಾದ್ಯಂತ ಇಂದು ಘರ್ಷಣೆ ಹಾಗೂ ವಿವಿಧ ವಿವಾದಗಳು ತುಂಬಿ ತುಳುಕುತ್ತಿವೆ. ಅಂತಾರಾಷ್ಟ್ರೀಯ ಗಡಿ ವಿವಾದ, ಜನಾಂಗೀಯ ಸಂಘರ್ಷ, ನದಿ ನೀರು ವಿವಾದ ಸೇರಿದಂತೆ ಹಲವು ವಿವಾದಗಳು ದಶಕಗಳಿಂದ ಉಲ್ಬಣಗೊಳ್ಳುತ್ತಿವೆ. 3ನೇ ತಟಸ್ಥ ಪಕ್ಷ ಅಥವಾ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಅನೇಕ ಸುತ್ತಿನ ಮಾತುಕತೆಗಳು ನಡೆದರೂ ಈ ವಿವಾದಗಳು ಮಾತ್ರ ಬಗೆಹರಿದಿಲ್ಲ.
ಜಾಗತಿಕ ರಂಗದಲ್ಲಿ ಅಂತಾರಾಷ್ಟ್ರೀಯ ವಿವಾದಗಳನ್ನು ಬಗೆಹರಿಸುವಲ್ಲಿ ಗಾಂಧೀಜಿ ಮತ್ತವರ ತತ್ವ ಸಿದ್ಧಾಂತಗಳು ಪರಿಹಾರವಾಗಿದ್ದು ಬಲು ವಿರಳ. ವಿವಾದಗಳು ಪರಿಹಾರಗೊಂಡಿದೆ ಎಂಬುದಕ್ಕೆ ಒಂದು ನಿದರ್ಶನ ಸಿಗುವುದು ಕೂಡ ಕಷ್ಟ. ಅದೇ ರೀತಿ, ಜಾಗತಿಕ ಸಮುದಾಯಗಳು ಗಾಂಧೀಜಿಯನ್ನು ಗೌರವಿಸುತ್ತಾರೆ ಅಂದ ಮಾತ್ರಕ್ಕೆ ಗಾಂಧೀಜಿ, ‘ವಿವಾದಗಳನ್ನು ಬಗೆಹರಿಸುವವರು’ ಎಂದು ಭಾವಿಸುವುದು ತಪ್ಪು. ಆದರೆ ಅಂತಾರಾಷ್ಟ್ರೀಯ ವಿವಾದಗಳನ್ನು ಬಗೆಹರಿಸುವಾಗ ಇಂದಿನ ವಿವಾದ ಅಥವಾ ಸಂಘರ್ಷಗಳನ್ನು ಗಾಂಧಿ ವಿಧಾನದ ಮೂಲಕ ಬಗೆಹರಿಸಲು ಹೆಚ್ಚು ಅನುಕೂಲ ಎಂಬುದು ಜಾಗತಿಕ ಸಂಸ್ಥೆಗಳ ಅಭಿಪ್ರಾಯ. ಪ್ರಮುಖವಾಗಿ ಗಾಂಧಿಯವರ ಸಿದ್ಧಾಂತಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಸ್ಯೆಗಳ ಬಗೆಹರಿಕೆಗೆ ಟಾನಿಕ್ ಆಗಿ ಪರಿಗಣಿತವಾಗಿವೆ.
ಜಗತ್ತು ಇಂದು ಅನುಭವಿಸುತ್ತಿರುವ ಕಷ್ಟಗಳಿಗೆ ಗಾಂಧೀಜಿ ಅವರು ಏಳು ದಶಕಗಳ ಹಿಂದೆಯೇ ಪರಿಹಾರ ನೀಡಿದ್ದರು. ಶಾಂತಿ ಸ್ಥಾಪನೆ ಬಗೆಗೆ ಗಾಂಧಿಯ ಕಲ್ಪನೆಗಳು, ಅವರ ವಿವಿಧ ಬರಹ ಹಾಗೂ ಭಾಷಣಗಳ ಮೂಲಕ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಒದಗಿಸಿವೆ.
ಸಹಿಷ್ಣುತೆ ಇಲ್ಲದಾಗ ಮೂರನೇ ವ್ಯಕ್ತಿ ಮಧ್ಯಸ್ಥಿಕೆ ಬೇಕು:
ವಾಸ್ತವವಾಗಿ, ಇಂದು ನಮ್ಮೆದುರಿಗಿರುವ ಬಹುಪಾಲು ಜಾಗತಿಕ ವಿವಾದ ಬಗೆಹರಿಸುವ ತಂತ್ರಗಳ ಮೇಲೆ, ಗಾಂಧೀಜಿ ತಮ್ಮ ಕಾಲಘಟ್ಟದಲ್ಲಿ ಹೇಗೆ ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಕಂಡಿದ್ದರು ಎಂಬುದರ ಸ್ಪಷ್ಟ ನೆರಳು ಬಿದ್ದಿದೆ. ಗಾಂಧೀಜಿ ಹೇಳುವ ಪ್ರಕಾರ ನಮ್ಮ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ನಾವು ಮೊದಲು ಸಹನೆ ಹೊಂದಿರಬೇಕು. ಈ ಸಹಿಷ್ಣುತೆ ಇಲ್ಲದೇ ಹೋದಾಗ ಮಾತ್ರ ನಮ್ಮ ಸಮಸ್ಯೆಗಳ ಬಗೆಹರಿಕೆಗೆ ನಾವು ಮೂರನೇ ವ್ಯಕ್ತಿಯ (ಅಂತಾರಾಷ್ಟ್ರೀಯ ಸಂಸ್ಥೆ) ಮಧ್ಯಸ್ಥಿಕೆಗೆ ಮೊರೆ ಹೋಗುತ್ತೇವೆ. ನಮ್ಮಲ್ಲಿ ಸಹನೆಯಿದ್ದರೆ ಅದನ್ನು ತಪ್ಪಿಸಬಹುದು ಎಂಬುದು ಮಹಾತ್ಮನ ಚಿಂತನೆ.
ಅಂತಾರಾಷ್ಟ್ರೀಯ ಸಂಸ್ಥೆಯ ಮಧ್ಯಸ್ಥಿಕೆ ತಪ್ಪಿಸಲು, ನಮ್ಮ ನಡುವಿನ ಸಹಿಷ್ಣುತೆಯು ಸಾಮಾಜಿಕ, ಜನಾಂಗೀಯ, ಧಾರ್ಮಿಕ ಮತ್ತು ರಾಜಕೀಯ ವಿಚಾರಗಳ ಹಲವಾರು ಅಂಶಗಳನ್ನು ಹೊಂದಿದೆ ಎಂದು ಗಾಂಧೀಜಿ ನಂಬಿದ್ದರು. ಯಾವಾಗ ಸಹನೆ ಕುಂದಿ ಹೋಗುತ್ತೋ, ಆಗ ಶಾಂತಿ ಅಪಾಯದಲ್ಲಿದೆ ಎಂದರ್ಥ. ವಿವಾದಗಳ ಬಗೆಹರಿಕೆಗೆ ರಾಷ್ಟ್ರಗಳ ನಡುವಣ ಸಂಘರ್ಷದ ನೈಜ ಅಂಶವನ್ನು ಗುರುತಿಸಿ ಬಗೆಹರಿಸಬೇಕು ಎಂಬುದು ಗಾಂಧೀಜಿ ಅವರ ಅಭಿಪ್ರಾಯ.
ಅಹಿಂಸಾ ಮಾರ್ಗದಲ್ಲೇ ಯಶಸ್ಸು ಕಂಡವರಿವರು...
ಆದರೂ ಮಹಾತ್ಮ ಹೇಳಿದಂತೆ ತಮ್ಮ ದೇಶ ಹಾಗೂ ಸಮಾಜವನ್ನು ಹಿಂಸೆಯಿಂದ ಮುಕ್ತಗೊಳಿಸಿ ಅಹಿಂಸಾ ಮಾರ್ಗದಿಂದಲೇ ಶಾಂತಿ ಸ್ಥಾಪಿಸಿದ ಹಲವರು ನಮಗೆ ನಿದರ್ಶನವಾಗಿ ಸಿಗುತ್ತಾರೆ. ಅವರಲ್ಲಿ, ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರೋಧಿ ಕ್ರಾಂತಿಕಾರಿ ಹಾಗೂ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ನೋಬೆಲ್ ಶಾಂತಿ ಪಾರಿತೋಷಕ ಪಡೆದ ಮಾರ್ಟಿ ಅಹ್ತಿಸಾರಿ(2008), ಮೊಹಮ್ಮದ್ ಯೂನಸ್(2006), ವಾಂಗರಿ ಮಾತಾಯಿ(2004) ಮತ್ತು ಶಿರಿನ್ ಇಬಾದಿ(2003) ಪ್ರಮುಖರು. ಇವರು ತಮ್ಮ ದಕ್ಷ ಕೆಲಸದ ಮೂಲಕ ರಾಷ್ಟ್ರಮಟ್ಟದಲ್ಲಿ ಶಾಂತಿನೆಲೆಸುವಂತೆ ತಮ್ಮ ಸಮಾಜದಲ್ಲಿ ಸೌಹಾರ್ದತೆಯನ್ನು ಕಾಪಾಡಿ ಜಗತ್ತನ್ನು ಪರಿಣಾಮಕಾರಿಯಾಗಿ ಬದಲಾಯಿಸಿದ್ದಾರೆ.
ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಘರ್ಷಣೆಗಳು ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವಾಗ ಮಹಾತ್ಮ ಹೇಳಿದ ಉನ್ನತ, ಆದರ್ಶವಾದಿ ಆಲೋಚನೆಗಳು ವಾಸ್ತವದಲ್ಲಿ ಎಷ್ಟು ದೂರದಲ್ಲಿವೆ ಎಂಬುದನ್ನು ಅರಿತು ಮುನ್ನಡೆಯಬೇಕಾಗಿದೆ.