ಒಬ್ಬ ಸಾಮಾನ್ಯ ರಾಜಕಾರಣಿ ಮೂರು ಹೊತ್ತೂ ಮುಂದಿನ ಚುನಾವಣೆ ಬಗ್ಗೆ ಚಿಂತಿಸುತ್ತಿರುತ್ತಾನೆ. ಆದರೆ ಒಬ್ಬ ಗೌರವಯುತ ರಾಜಕಾರಣಿ ಅಥವಾ ರಾಜನೀತಿಜ್ಞ, ಜನತೆ ಹಾಗೂ ಮುಂದಿನ ತಲೆಮಾರಿನ ಭವಿಷ್ಯದ ಬಗ್ಗೆ ಚಿಂತಿಸುತ್ತಾನೆ ಎಂದು ಹೇಳಲಾಗುತ್ತದೆ. ಮಹಾತ್ಮಾ ಗಾಂಧಿ ತಮ್ಮನ್ನು ಒಬ್ಬ ರಾಜಕಾರಣಿ ಎಂದು ಬಿಂಬಿಸುತ್ತಿದ್ದರು. ಅವರು ಒಬ್ಬ ಸಂತನಾಗಿರಲು ಪ್ರಯತ್ನಿಸುತ್ತಿದ್ದರು.
ಅವರ ಚಿಂತನೆ, ಮಾತು ಮತ್ತು ಅವರು ಮಾಡಿದ ಕಾರ್ಯಗಳು ಮನುಕುಲಕ್ಕೆ ಅಜರಾಮರ ಕೊಡುಗೆ. ಅವರೊಬ್ಬ ಅಸಾಧಾರಣ ಮನುಷ್ಯ. ಪರಿಶುದ್ಧತೆ ಮತ್ತು ಸಂಪೂರ್ಣ ಸಮಗ್ರತೆಯೇ ಮಹಾತ್ಮ ಗಾಂಧಿಯವರಿಗೆ ಅವರ ಜೀವನದಲ್ಲಿ ತುಂಬಾ ಶಕ್ತಿಯನ್ನು ನೀಡಿತು. ಅದು ಸಮಾಜದ ಪ್ರತಿ ಪೀಳಿಗೆಯನ್ನು ಅವರ ತತ್ತ್ವಶಾಸ್ತ್ರದೆಡೆಗೆ ಆಕರ್ಷಿಸುತ್ತದೆ.
ಮಹಾತ್ಮಾ ಗಾಂಧಿ, ಮಾನವ ಪ್ರಜ್ಞೆಯನ್ನು ಉನ್ನತೀಕರಿಸಿದ, ಮಾನವೀಯತೆಯು ಸಾಮಾನ್ಯ ಪ್ರವೃತ್ತಿಯನ್ನು ಮೀರುವಂತೆ ಮಾಡಿದ ಮತ್ತು ನೈತಿಕ ಶಕ್ತಿ, ಸತ್ಯ ಮತ್ತು ಆತ್ಮಸಾಕ್ಷಿಯಿಂದ ನಮ್ಮ ನಡವಳಿಕೆಯನ್ನು ರೂಪಿಸಲು ಸಹಾಯ ಮಾಡಿದ ಗೌತಮ ಬುದ್ಧ, ಮಹಾವೀರ ಮತ್ತು ಯೇಸುಕ್ರಿಸ್ತರಂತಹ ಮಹಾನ್ ವ್ಯಕ್ತಿಗಳ ವರ್ಗಕ್ಕೆ ಸೇರಿದವರು. ಅವರ ಜೀವನವು ಸಂಪ್ರದಾಯ ಮತ್ತು ಧರ್ಮದಲ್ಲಿ ಬೇರೂರಿದೆ. ಆದರೆ ಅವರು ಎಲ್ಲಾ ನಂಬಿಕೆಗಳನ್ನು ಮೀರಿ ನಿಜವಾದ ಮಾನವತಾವಾದ ಮತ್ತು ಸಾರ್ವತ್ರಿಕ ಸಹೋದರತ್ವವನ್ನು ಕಲಿಸಿದರು. ಸಮಾಜದಲ್ಲಿ ಅನ್ಯಾಯ ತಾಂಡವವಾಡುವುದನ್ನು ತಿರಸ್ಕರಿಸಿದ ಅವರು, ಹಿಂಸಾತ್ಮಕ ಸಂಘರ್ಷವನ್ನು ವಿರೋಧಿಸಿದರು. ಅವರ ಆಲೋಚನೆಗಳು, ಜೀವನ ಮತ್ತು ಬೋಧನೆಗಳ ಅಸಾಧಾರಣ ಶಕ್ತಿಯು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಿದೆ.
ನಾವು ಪರಮಾಣು ಯುಗದಲ್ಲಿ ವಾಸಿಸುತ್ತಿದ್ದೇವೆ. ಥರ್ಮೋನ್ಯೂಕ್ಲಿಯರ್ ಸಾಮರ್ಥ್ಯದಿಂದ ವಿಶ್ವದ ಹಿರಿತಲೆಗಳು ಜಾಗತಿಕ ನಾಶಕ್ಕೆ ಮುಂದಡಿ ಇಡುತ್ತಿವೆ. ಎರಡನೇ ಮಹಾಯುದ್ಧದ ಬಳಿಕ ಜಾಗತಿಕ ಶಾಂತಿಸ್ಥಾಪನೆಯಲ್ಲಿ ಗಾಂಧೀಜಿಯವರ ಅಹಿಂಸಾ ತತ್ವವು ಪ್ರಬಲ ಪ್ರಭಾವ ಬೀರಿತ್ತು. ವಾಸ್ತವ ಜಗತ್ತಿನಲ್ಲಿ, ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಅಥವಾ ಪ್ರಾದೇಶಿಕ ವಿಜಯಕ್ಕಾಗಿ ಮತ್ತೊಂದು ದೇಶದ ಮೇಲೆ ಆಕ್ರಮಣ ಮಾಡುವ ಬಗ್ಗೆ ಯೋಚಿಸುವ ಮಾತು ಸಲ್ಲದು. ಇದರ ಪರಿಣಾಮವಾಗಿ, ಜಗತ್ತಿನಾದ್ಯಂತ ಅನೇಕ ಸವಾಲುಗಳ ಹೊರತಾಗಿಯೂ, ಮಾನವಕುಲವು ಇತಿಹಾಸದಲ್ಲಿ ಅತ್ಯಂತ ಶಾಂತಿಯುತ ಅವಧಿಗೆ ಸಾಕ್ಷಿಯಾಗಿದೆ.
ವರ್ಷದ ಹಿಂದೆ 15 ವರ್ಷದ ಗ್ರೇಟಾ ಥನ್ಬರ್ಗ್ ಎಂಬ ಸ್ವೀಡಿಶ್ ಶಾಲಾ ಬಾಲಕಿಯೊಬ್ಬಳು, ವಾತಾವರಣದಲ್ಲಿ ಹಸಿರುಮನೆ ಅನಿಲದ ಏರಿಕೆ ಮತ್ತು ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಿದಳು. ಆ ಬಾಲಕಿಯ ಹೋರಾಟ, ಪರಿಸರದ ಬಗೆಗಿನ ಕಾಳಜಿ ಎಲ್ಲವೂ ಗಾಂಧೀವಾದಕ್ಕೆ ಸಮನಾಗಿತ್ತು. ಬಾಪೂಜಿ ಜಗತ್ತಿನ ಪ್ರಥಮ ಪರಿಸರವಾದಿ. "ಪ್ರತಿಯೊಬ್ಬನ ಅಗತ್ಯಕ್ಕೆ ಬೇಕಾಗುವಷ್ಟು ಭೂಮಿಯಲ್ಲಿದೆ. ಆದ್ರೆ ಪ್ರತಿಯೊಬ್ಬರ ದುರಾಸೆಗೆ ಬೇಕಾದಷ್ಟಿಲ್ಲ" ಎಂದು ಗಾಂಧಿ ಹೇಳಿದ್ದಾರೆ. ಮಹಾತ್ಮನ ಲೋಕಜ್ಞಾನದ ಮಾತುಗಳಿಂದ ಜಗತ್ತು ಇಂದು ಎಚ್ಚೆತ್ತುಕೊಳ್ಳುತ್ತಿದೆ. ಅವರ ಪಾಂಡಿತ್ಯದ ಮಾತುಗಳು ಹಿಂದೆಂದಿಗಿಂತ ಹೆಚ್ಚು ಹೆಚ್ಚು ಪ್ರಸ್ತುತವಾಗಿದೆ.
ಹಲವರಿಗೆ ಸ್ಫೂರ್ತಿ ಗಾಂಧಿ ತತ್ವ...
ಅನ್ಯಾಯದ ವಿರುದ್ಧ ಹೋರಾಡಲು ಗಾಂಧೀಜಿಯವರು ಜಗತ್ತಿಗೆ ಪ್ರಬಲ ಅಸ್ತ್ರ ನೀಡಿದರು. ಅವರ ಅಹಿಂಸೆ, ಸತ್ಯಾಗ್ರಹ ಮತ್ತು ಸತ್ಯ ಎಂಬ ತತ್ವ ಅನೇಕ ಚಳುವಳಿಗಳ ಮೇಲೆ ಪ್ರಭಾವ ಬೀರಿವೆ. ಅಷ್ಟೇ ಅಲ್ಲ ಅನೇಕ ಮಹಾನ್ ಪುರುಷರು ಮತ್ತು ಮಹಿಳೆಯರ ಚಿಂತನೆಗಳನ್ನು ಬದಲಿಸುವ ಮೂಲಕ ಮಾನವ ಇತಿಹಾಸದ ಹಾದಿಯನ್ನು ಬದಲಿಸಿದೆ. ನೆಲ್ಸನ್ ಮಂಡೇಲಾರ ವರ್ಣಭೇದ ವಿರೋಧಿ ಚಳುವಳಿ ಗಾಂಧೀಜಿಯ ಆದರ್ಶಗಳಿಂದ ತೀವ್ರವಾಗಿ ಪ್ರಭಾವಿತವಾಯಿತು. ಅಂತಿಮವಾಗಿ ಮಂಡೇಲಾ ಮತ್ತು ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ನ ಅಹಿಂಸೆ ಮತ್ತು ನೈತಿಕ ಬಲವು ಜಾಗತಿಕ ಸಮುದಾಯ ಮತ್ತು ದಕ್ಷಿಣ ಆಫ್ರಿಕಾದ ವರ್ಣಭೇದ ಸರ್ಕಾರವನ್ನು ಪ್ರಚೋದಿಸಿತು. ಮಾತ್ರವಲ್ಲದೆ ಶಾಂತಿಯುತ ಹೋರಾಟದ ಮೂಲಕ ವರ್ಣಭೇದ ನೀತಿಯ ಅಂತ್ಯಕ್ಕೆ ದಾರಿಮಾಡಿಕೊಟ್ಟಿತು.
ಯುಎಸ್ನಲ್ಲಿ ಮಾರ್ಟಿನ್ ಲೂಥರ್ ಕಿಂಗ್ ನೇತೃತ್ವದ ನಾಗರಿಕ ಹಕ್ಕುಗಳ ಆಂದೋಲನ, ಬರ್ಮಾ, ಫಿಲಿಪೈನ್ಸ್ ಮತ್ತು ಇತರ ಹಲವು ದೇಶಗಳಲ್ಲಿ ಪ್ರಜಾಪ್ರಭುತ್ವದ ಶಾಂತಿಯುತ ಚಳುವಳಿಗಳು, ಬರ್ಲಿನ್ ವಾಲ್ನ ಶಾಂತಿಯುತ ಪತನ ಮತ್ತು ಜರ್ಮನಿಯ ಏಕೀಕರಣ, ಸೋವಿಯತ್ ಒಕ್ಕೂಟದ ಪತನ ಮತ್ತು ಪೂರ್ವ ಯುರೋಪಿನಲ್ಲಿ ನಿರಂಕುಶ ಸರ್ವಾಧಿಕಾರಕ್ಕೆ ಅಹಿಂಸಾತ್ಮಕ ಅಂತ್ಯ... ಇವೆಲ್ಲವೂ ಮಹಾತ್ಮ ಗಾಂಧಿಯವರ ಸಂದೇಶ, ಅಹಿಂಸಾ ಮಾರ್ಗ, ಸತ್ಯ, ಶಕ್ತಿ ಮತ್ತು ಶಾಂತಿಯುತ ಸಾಮರಸ್ಯದ ಪರಿಹಾರದಿಂದ ಪ್ರಭಾವಿತವಾಗಿವೆ.