ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ, ನ್ಯಾಯ ಹಾಗೂ ಶಾಂತಿಯುತ ಸಮಾಜವನ್ನ ಸೃಷ್ಟಿಸಿ, ಅದರಲ್ಲಿ ಮಾನವರು ಪರಸ್ಪರ ಸೌಹಾರ್ದತೆಯಿಂದ ಬದುಕುವಂತೆ ಮಾಡಿರುವುದು ರಾಷ್ಟ್ರಪಿತನ ಶ್ರೇಷ್ಠತೆ. ಈ ಮೂಲಕ ಅವರು, ಮನುಕುಲಕ್ಕೆ ಮಹಾತ್ಮಾ ಗಾಂಧೀಜಿಯವರ ಬಹುದೊಡ್ಡ ಕೊಡುಗೆಯಾಗಿದೆ.
ಅನ್ಯಾಯದ ವಿರುದ್ಧ ಹೋರಾಡಲು ಗಾಂಧೀಜಿಯವರು ಅಭಿವೃದ್ಧಿಪಡಿಸಿದ ವಿಶಿಷ್ಟ ತಂತ್ರವೇ 'ಸತ್ಯಾಗ್ರಹ'. ಸತ್ಯವನ್ನು 50 ವರ್ಷಗಳ ಕಾಲ ಪ್ರಯೋಗಕ್ಕೆ ಒಳಪಡಿಸಿದ ಅವರು ಈ ತಂತ್ರವನ್ನು ಅಳವಡಿಸಿಕೊಂಡಿದ್ದರು. ದೇಶವನ್ನು ಬ್ರಿಟಿಷ್ ಆಡಳಿತದಿಂದ ಮುಕ್ತಗೊಳಿಸಲು ಮಹಾತ್ಮ ಗಾಂಧೀಜಿ ಸತ್ಯಾಗ್ರಹ ಚಳವಳಿ ಪ್ರಾರಂಭಿಸಿ ಅದನ್ನು ಮುನ್ನಡೆಸಿದರು.
ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಲು ಹಾಗೂ ಅವರ ಅಹಮದಾಬಾದ್ನ ಸಾಬರಮತಿ ಮತ್ತು ವಾರ್ಧಾದ ಸೇವಾಗ್ರಾಮದಲ್ಲಿ ವಾಸಿಸಲಿಚ್ಛಿಸುವವರಿಗೆ ಗಾಂಧೀಜಿ ಹನ್ನೊಂದು ಕಟ್ಟುಪಾಡುಗಳನ್ನು ವಿಧಿಸಿದ್ದರು. ಬಳಿಕ ಇದನ್ನು ಅವರ ಶಿಷ್ಯ ವಿನೋಬಾ ಭಾವೆ 'ಏಕಾದಶ ವ್ರತ' ಎಂದು ಕರೆದರು. ಇದೇ ಹನ್ನೊಂದು ವಚನಗಳು ಗಾಂಧೀಜಿಯವರ ಪ್ರೇರಣೆಯಿಂದ ದೇಶದೆಲ್ಲೆಡೆ ಸ್ಥಾಪಿತವಾದ ಅನೇಕ ಆಶ್ರಮಗಳಲ್ಲಿ ಅಳವಡಿಕೆಯಾಗಿದ್ದು, ಹೆಸರುವಾಸಿಯಾಗಿವೆ.
ಭಾರತಕ್ಕೆ ಗಾಂಧೀಜಿ ವಾಪಸ್ ಬರುವ ಮುನ್ನ ಗಾಂಧೀಜಿ ಸುಮಾರು 20 ವರ್ಷಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಕಳೆದಿದ್ದರು. ಪ್ರಾರಂಭದಲ್ಲಿ ಅವರು ಹಣ ಸಂಪಾದಿಸುವ ಉದ್ದೇಶದಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದರು. ಬಳಿಕ ಅಲ್ಲಿಗೆ ವಲಸೆ ಬಂದಿದ್ದ ಭಾರತೀಯರ ಸಮಸ್ಯೆಗಳ ಕುರಿತು ಗಮನ ಹರಿಸಿದ ಗಾಂಧೀಜಿ, ತಮ್ಮ ಕಾನೂನು ಅಭ್ಯಾಸವನ್ನು ತೊರೆದು ವಲಸೆ ಹೋಗಿದ್ದ ಭಾರತೀಯರ ಹಕ್ಕುಗಳಿಗಾಗಿ ಅಹಿಂಸಾತ್ಮಕ ಹೋರಾಟ ನಡೆಸಿದರು. ಆನಂತರದಲ್ಲಿ ಇದನ್ನೇ ಸತ್ಯಾಗ್ರಹ ಎಂದು ಬಣ್ಣಿಸಲಾಯಿತು. ಗಾಂಧೀಜಿಯವರಿಗೆ ಸತ್ಯಾಗ್ರಹ ಕೇವಲ ಅಹಿಂಸಾತ್ಮಕ ಹೋರಾಟವಾಗಿರಲಿಲ್ಲ. ಬದಲಾಗಿ ಅವರ ಜೀವನದ ಅತ್ಯಮೂಲ್ಯ ತತ್ವವಾಗಿತ್ತು.
ಸತ್ಯಾಗ್ರಹ ಮಾಡುವವರು ಯಾವುದೇ ರೀತಿಯ ಅನ್ಯಾಯವನ್ನು ಸಹಿಸಿಕೊಳ್ಳಬಾರದು ಎಂದು ಮಹಾತ್ಮಾ ಗಾಂಧೀಜಿ ನಂಬಿದ್ದರು. ಸತ್ಯಾಗ್ರಹಕ್ಕೆ ಯಾವುದೇ ಅಡೆತಡೆ ಬಂದರೂ ದಿಟ್ಟವಾಗಿ ಎದುರಿಸಬೇಕು. ಇಲ್ಲಿ ಹೇಡಿತನಕ್ಕೆ ಅವಕಾಶವಿಲ್ಲ. ಹೋರಾಟವು ಅನ್ಯಾಯದ ವಿರುದ್ಧ ಇರಬೇಕೇ ಹೊರತು, ಅನ್ಯಾಯ ಎಸಗುವ ವ್ಯಕ್ತಿಯ ವಿರುದ್ಧ ಇರಬಾರದು. ಹೋರಾಟ ಪ್ರತೀಕಾರ ತೀರಿಸಲು ಅಥವಾ ಎದುರಾಳಿಯನ್ನು ಶಿಕ್ಷಿಸುವ ಸಲುವಾಗಿ ನಡೆಯಬಾರದು. ಸಮಾಜದಲ್ಲಿ ಒಳ್ಳೆಯ ಹಾಗೂ ಕೆಟ್ಟ ಜನರಿರುತ್ತಾರೆಯೇ ಹೊರತು ಇಡೀ ಸಮಾಜವೇ ಕೆಟ್ಟದಾಗಿರಲು ಸಾಧ್ಯವಿಲ್ಲ.