ಭಾರತೀಯ ಸಮಾಜದಲ್ಲಿ ಬೇರೂರಿರುವ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸುವಲ್ಲಿ ಮಹಾತ್ಮಾ ಗಾಂಧೀಜಿಯವರ ಪಾತ್ರ ಅನನ್ಯ. ಅದರಲ್ಲೂ ಮಕ್ಕಳು ಹಾಗೂ ಮಹಿಳೆಯರ ಹಕ್ಕುಗಳನ್ನು ಕಾಪಾಡಲು ಗಾಂಧೀಜಿಯವರು ಅಹರ್ನಿಶಿ ಹೋರಾಟ ಮಾಡಿದರು. ಧರ್ಮಶಾಸ್ತ್ರ, ಕಾನೂನು ಹಾಗೂ ಸಂಪ್ರದಾಯ ಹೀಗೆ ಯಾವುದೇ ಕಾರಣದಿಂದಲೂ ಮಹಿಳೆ ಹಾಗೂ ಮಕ್ಕಳ ಮೇಲೆ ದೌರ್ಜನ್ಯ ನಡೆಸುವುದಕ್ಕೆ ಗಾಂಧೀಜಿಯವರು ವಿರುದ್ಧವಾಗಿದ್ದರು. ಹಾಗೆಯೇ ಲಿಂಗ ಸಮಾನತೆ ಹಾಗೂ ಲಿಂಗತ್ವದ ಕಾರಣದಿಂದ ಸಮಾಜದಲ್ಲಿ ಉಂಟಾಗುವ ಹಿಂಸಾತ್ಮಕ ಪ್ರತಿಕ್ರಿಯೆಗಳ ಬಗ್ಗೆಯೂ ಅವರು ಕಾಳಜಿ ಹೊಂದಿದ್ದರು.
ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಗಾಂಧೀಜಿಯವರ ನಿಲುವು
ಹೆಣ್ಣು ಯಾವತ್ತಿದ್ದರೂ ಕೊಟ್ಟ ಮನೆಗೆ ಹೋಗುವವಳು ಎಂಬ ತಾತ್ಸಾರದ ಬಗ್ಗೆ ಗಾಂಧೀಜಿಯವರಿಗೆ ಅರಿವಿತ್ತು. ಹೆಣ್ಣನ್ನು ಪಾಲಕರು ಹೊರೆಯಾಗಿ ನೋಡುತ್ತಾರೆ ಎಂಬುದನ್ನು ತಿಳಿದಿದ್ದ ಗಾಂಧೀಜಿ ಹೆಣ್ಣು ಶಿಶು ಹತ್ಯೆಯನ್ನು ಪ್ರಬಲವಾಗಿ ವಿರೋಧಿಸುತ್ತಿದ್ದರು. ಈ ಜಗತ್ತಿಗೆ ಹೆಣ್ಣು ಹಾಗೂ ಗಂಡು ಇಬ್ಬರೂ ಅಷ್ಟೇ ಅಗತ್ಯ ಎಂಬುದನ್ನು ಪ್ರತಿಪಾದಿಸುತ್ತಿದ್ದ ಗಾಂಧಿ, ಗಂಡು ಮಗು ಹುಟ್ಟಿದಷ್ಟೇ ಸಂಭ್ರಮವನ್ನು ಹೆಣ್ಣು ಹುಟ್ಟಿದಾಗಲೂ ಪಡಬೇಕು ಎಂದು ಹೇಳುತ್ತಿದ್ದರು. ಇನ್ನು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದ ಮೂಲ ಬೇರಾದ ವರದಕ್ಷಿಣೆ ಪದ್ಧತಿಯನ್ನು ಗಾಂಧಿ ಖಂಡತುಂಡವಾಗಿ ವಿರೋಧಿಸುತ್ತಿದ್ದರು.
ಹೆಣ್ಣು ಮಕ್ಕಳ ಸಾಕ್ಷರತೆಯ ಬಗ್ಗೆ ಒಲವು ಹೊಂದಿದ್ದ ಗಾಂಧೀಜಿ
ಶಿಕ್ಷಣ ಹಾಗೂ ಜಗತ್ತಿನ ಜ್ಞಾನದ ಕೊರತೆಯೇ ಹೆಣ್ಣು ಮಕ್ಕಳ ಮೇಲಿನ ಎಲ್ಲ ದೌರ್ಜನ್ಯಗಳಿಗೂ ಕಾರಣ ಎಂದು ಗಾಂಧೀಜಿ ನಂಬಿದ್ದರು. ಹೀಗಾಗಿ ಪುರುಷರ ಸಮಾನವಾಗಿ ಹೆಣ್ಣು ಮಕ್ಕಳನ್ನೂ ಸಾಕ್ಷರರನ್ನಾಗಿ ಮಾಡಬೇಕೆಂಬುದು ಅವರ ನಿಲುವಾಗಿತ್ತು. ಹೆಣ್ಣು ಮಕ್ಕಳು ತಮ್ಮ ಸಹಜ ನ್ಯಾಯ ಪಡೆದುಕೊಳ್ಳಲು ಹಾಗೂ ಸಮಾಜದಲ್ಲಿ ಗೌರವದಿಂದ ಬಾಳಲು ಶಿಕ್ಷಣ ಬೇಕೇ ಬೇಕು ಎಂದು ಪ್ರತಿಪಾದಿಸಿದರು ಗಾಂಧಿ.
ಬಾಲ್ಯ ವಿವಾಹಕ್ಕೆ ವಿರೋಧ
ಮಕ್ಕಳಿಗೆ ಅರಿವು ಮೂಡುವ ಮೊದಲೇ ಅವರಿಗೆ ಮದುವೆ ಮಾಡುವುದು ಸರಿಯಲ್ಲ. ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುವ ಮುಂಚೆಯೇ ಬಾಲ್ಯ ವಿವಾಹ ಮಾಡುವುದು ಸರಿಯಲ್ಲ ಎಂಬುದು ಗಾಂಧೀಜಿಯವರ ನಿಲುವಾಗಿತ್ತು. ಬಾಲ್ಯವಿವಾಹವು ನೈತಿಕ ಹಾಗೂ ದೈಹಿಕ ಅನಿಷ್ಟವಾಗಿದೆ ಎಂದು ಗಾಂಧೀಜಿ ಹೇಳುತ್ತಿದ್ದರು. ಇನ್ನು ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳ ಜೀವನದಲ್ಲಿ ಏಳಿಗೆ ಸಾಧ್ಯವಾಗುವುದಿಲ್ಲ ಎಂದು ಗಾಂಧೀಜಿಯವರು ಸ್ಪಷ್ಟವಾಗಿ ಹೇಳುತ್ತಿದ್ದರು.
ವರದಕ್ಷಿಣೆ ಪಿಡುಗು ನಿಲ್ಲಿಸಲು ಗಾಂಧೀಜಿ ಹೋರಾಟ
ವರದಕ್ಷಿಣೆಯ ಪದ್ಧತಿಯಿಂದಾಗಿ ಹೆಣ್ಣು ಮಕ್ಕಳು ಕೇವಲ ಮಾರಾಟದ ಸರಕಾಗಿದ್ದಾರೆ ಎಂದು ಗಾಂಧೀಜಿ ಹೇಳುತ್ತಿದ್ದರು. ವರದಕ್ಷಿಣೆಯು ಸಮಾಜಕ್ಕೆ ಅಂಟಿದ ಶಾಪವೆಂದು ಹಾಗೂ ಇದರಿಂದ ಮಹಿಳೆಯ ಘನತೆಗೆ ಕುಂದು ಉಂಟಾಗುತ್ತಿದೆ ಎಂದು ಗಾಂಧಿ ನಂಬಿದ್ದರು. ಹೀಗಾಗಿ ಎಲ್ಲ ಪಾಲಕರು ತಮ್ಮ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಹಾಗೂ ವರದಕ್ಷಿಣೆ ಬೇಡುವ ಪುರುಷನೊಂದಿಗೆ ಯಾವುದೇ ಕಾರಣಕ್ಕೂ ಮದುವೆ ಮಾಡಿ ಕೊಡಬಾರದು ಎಂದು ಗಾಂಧಿ ಕರೆ ನೀಡಿದರು.
ಬಹುಪತ್ನಿತ್ವ ಬಗ್ಗೆ ಗಾಂಧೀಜಿ ನಿಲುವು
ಪತ್ನಿ ಯಾವತ್ತೂ ಪತಿಯ ಗುಲಾಮಳಲ್ಲ. ಅವಳು ಆತನ ಅರ್ಧಾಂಗಿ, ಜೀವನ ಸಂಗಾತಿ ಹಾಗೂ ಜೀವನದ ಅತ್ಯುತ್ತಮ ಗೆಳತಿ. ಪತ್ನಿಯು ಪತಿಯ ಎಲ್ಲ ಕಷ್ಟ ಹಾಗೂ ಸುಖಗಳಲ್ಲಿ ಸಮಾನ ಪಾಲುದಾರಳು. ಇಬ್ಬರೂ ಒಬ್ಬರಿಗೊಬ್ಬರು ಹಾಗೂ ಈ ಜಗತ್ತಿಗೆ ವಿಧೇಯರಾಗಿರಬೇಕು. ಪತಿ ಮಾಡುವ ಯಾವುದೇ ಪಾಪ ಕೃತ್ಯಕ್ಕೆ ಪತ್ನಿಯು ಹೊಣೆಯಲ್ಲ ಎಂದು ಗಾಂಧೀಜಿ ಹೇಳುತ್ತಿದ್ದರು. ಪುರುಷನೊಬ್ಬ ಹಲವಾರು ಪತ್ನಿಯರನ್ನು ಹೊಂದುವುದಕ್ಕೆ ಗಾಂಧೀಜಿ ವಿರುದ್ಧವಾಗಿದ್ದರು.
ಲೈಂಗಿಕ ದೌರ್ಜನ್ಯ ತಡೆಗೆ ಹೆಣ್ಣು ಮಕ್ಕಳಿಗೆ ತರಬೇತಿ ಅಗತ್ಯ
ಕೆಟ್ಟ ಜನರ ಲೈಂಗಿಕ ದೌರ್ಜನ್ಯದಿಂದ ಪಾರಾಗಬೇಕಾದರೆ ಹೆಣ್ಣು ಮಕ್ಕಳಿಗೆ ದೈಹಿಕ ರಕ್ಷಣಾ ತರಬೇತಿಯನ್ನು ನೀಡುವುದು ಅಗತ್ಯ ಎಂದು ಗಾಂಧೀಜಿ ಆಗಿನ ಕಾಲದಲ್ಲಿಯೇ ಹೇಳಿದ್ದರು. ಯಾರಿಂದಲೇ ಹೆಣ್ಣಿನ ಮೇಲೆ ಕಿರುಕುಳ, ದೌರ್ಜನ್ಯ ನಡೆದರೂ ಹೆಣ್ಣು ಸುಮ್ಮನೆ ಕೂರುವಂತಿಲ್ಲ. ಅಂಥ ಸಮಯದಲ್ಲಿ ಅಹಿಂಸೆಯನ್ನು ಪಾಲಿಸಬೇಕಾಗಿಲ್ಲ. ತನ್ನ ರಕ್ಷಣೆಗೆ ಹೆಣ್ಣು ಯಾವುದೇ ಕ್ರಮ ತೆಗೆದುಕೊಂಡರೂ ಅದು ಸರಿ ಎನ್ನುವುದು ಗಾಂಧಿ ತಿಳಿಸಿದರು.
ಮಹಿಳಾ ಸಬಲೀಕರಣಕ್ಕೆ ಗಾಂಧೀಜಿಯವರ ವಿಚಾರಗಳು
ಭಾರತೀಯ ಸಮಾಜದಲ್ಲಿ ಹೆಣ್ಣು ಮಕ್ಕಳ ಸ್ಥಾನಮಾನ, ಘನತೆ ಹೆಚ್ಚಬೇಕಾದರೆ ಅವರನ್ನು ಮೊದಲಿಗೆ ಸಾಕ್ಷರರನ್ನಾಗಿ ಮಾಡಬೇಕು ಎಂದು ಗಾಂಧೀಜಿ ಹೇಳುತ್ತಿದ್ದರು. ಇನ್ನು ಭಾರತದಲ್ಲಿರುವ ಬ್ರಿಟಿಷ್ ಕಾಲದ ಆಸ್ತಿ ಹಕ್ಕುಗಳ ಹೆಣ್ಣು ಮಕ್ಕಳಿಗೆ ವಿರುದ್ಧವಾಗಿವೆ. ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಪಾಲು ಸಿಗಬೇಕೆಂದು ಗಾಂಧಿ ಆಗಿನ ಕಾಲದಲ್ಲಿಯೇ ಧ್ವನಿ ಎತ್ತಿದ್ದರು. ಹಾಗೆಯೇ ಹೆಣ್ಣು ಮಕ್ಕಳು ಸ್ವತಂತ್ರವಾಗಿ ಹೊರಗಡೆ ಕೆಲಸ ಮಾಡಿ ಆರ್ಥಿಕ ಸ್ವಾವಲಂಬಿಯಾಗಬೇಕು ಎಂದು ಬಲವಾಗಿ ಪ್ರತಿಪಾದಿಸಿದರು.
ಹೆಣ್ಣು ಎಂಬುದು ದೇವರು ನೀಡಿದ ಕೊಡುಗೆಯಾಗಿದ್ದು, ಆತ ಹೆಣ್ಣು ಮಕ್ಕಳಲ್ಲಿ ತನ್ನೆಲ್ಲ ಶಕ್ತಿಯನ್ನೂ ಧಾರೆಯೆರೆದಿರುತ್ತಾನೆ ಎಂದು ಗಾಂಧೀಜಿ ಹೇಳುತ್ತಿದ್ದರು. ಒಂದೊಮ್ಮೆ ಹೆಣ್ಣು ತನ್ನ ಅಂತಃಶಕ್ತಿಯ ಬಗ್ಗೆ ಅರಿವು ಹೊಂದಿದಲ್ಲಿ ನಾರಿಶಕ್ತಿಯೇ ಈ ಜಗತ್ತನ್ನು ಆಳಲಿದೆ ಎಂದು ಗಾಂಧಿ ಹೇಳಿದ್ದು ಇಂದು ಸ್ಮರಣೀಯವಾಗಿದೆ.