ಬೀಜಿಂಗ್:ಗಾಲ್ವನ್ ಕಣಿವೆಯಲ್ಲಿ ನಡೆದ ಸಂಘರ್ಷವು ಪೂರ್ವ ನಿರ್ಧಾರಿತವಾಗಿದ್ದು, ಸಾವು ನೋವುಗಳಿಗೆ ಕಾರಣವಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.
ಗಾಲ್ವನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾದ ವಿದೇಶಾಂಗ ಸಚಿವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಚೀನಾಕ್ಕೆ ಬಲವಾದ ಸಂದೇಶ ನೀಡಿದ ಜೈಶಂಕರ್, ಈ ಬೆಳವಣಿಗೆಯು ದ್ವಿಪಕ್ಷೀಯ ಸಂಬಂಧದ ಮೇಲೆ ಗಂಭೀರ ಪರಿಣಾಮ ಉಂಟುಮಾಡಲಿ ಎಂದಿದ್ದಾರೆ.
ಚೀನಾ ತನ್ನ ಕಾರ್ಯಗಳನ್ನು ಮರು ಮೌಲ್ಯಮಾಪನ ಮಾಡುವುದು ಮತ್ತು ಅವುಗಳನ್ನು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ದೂರವಾಣಿ ಸಂಭಾಷಣೆಯಲ್ಲಿ ಜೈಶಂಕರ್ ತಿಳಿಸಿದ್ದಾರೆ.
ಗಡಿ ಘರ್ಷಣೆಯನ್ನು ನ್ಯಾಯಯುತ ರೀತಿಯಲ್ಲಿ ಪರಿಹರಿಸಲು ಭಾರತ, ಚೀನಾ ಒಪ್ಪಿಗೆ ಸೂಚಿಸಿದ್ದು, ಸಂಘರ್ಷಕ್ಕೆ ಕಾರಣರಾದವರನ್ನು ಕಠಿಣವಾಗಿ ಶಿಕ್ಷಿಸುವಂತೆ ಚೀನಾ ವಿದೇಶಾಂಗ ವಾಂಗ್ ಯಿ ಆಗ್ರಹಿಸಿದ್ದಾರೆ. ಆದಷ್ಟು ಬೇಗ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಉಭಯ ನಾಯಕರ ಒಪ್ಪಿಗೆ ಸೂಚಿಸಿದ್ದು, ಅಸ್ತಿತ್ವದಲ್ಲಿರುವ ಕಾರ್ಯವಿಧಾನದ ಮೂಲಕ ಭಿನ್ನಾಭಿಪ್ರಾಯ ಪರಿಹಾರ ಮಾಡಿಕೊಂಡು, ಎರಡೂ ಕಡೆಯವರು ಸಂವಹನ ಮತ್ತು ಸಮನ್ವಯವನ್ನು ಬಲಪಡಿಸಬೇಕು ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.