ನವದೆಹಲಿ:ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಪಿಂಕ್ ಬಸ್ಗೆ ಚಾಲನೆ ನೀಡಲು ಚಿಂತಿಸಲಾಗಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಲೋಕಸಭೆಯಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.
ಮಹಿಳೆಯರಿಗಾಗಿಯೇ ಬರುತ್ತಂತೆ ಪಿಂಕ್ ಬಸ್: ಏನಿದರ ವಿಶೇಷತೆ ತಿಳಿಬೇಕಾ...?
ಮಹಿಳೆಯರ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿದೆ. ಕೇಂದ್ರ ಸಾರಿಗೆ ಇಲಾಖೆಯೂ ಕೂಡಾ ಹಲವಾರು ಕ್ರಮಗಳನ್ನುನ ಕೈಗೊಂಡಿದ್ದು ಪಿಂಕ್ ಬಸ್ಗಳನ್ನು ಪರಿಚಯಿಸುವುದಾಗಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಮಹಿಳೆಯರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಇರುವ ಈ ಪಿಂಕ್ ಬಸ್ಗಳಲ್ಲಿ ಚಾಲಕ, ನಿರ್ವಾಹಕ ಹುದ್ದೆಗಳಿಗೆ ಕೇವಲ ಮಹಿಳೆಯರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಪಿಂಕ್ ಬಸ್ ಸೇವೆ ಈಗಾಗಲೇ ಹಲವು ನಗರಗಳಲ್ಲಿ ಚಾಲ್ತಿಯಲ್ಲಿದ್ದು ಒಂದು ಕೋಟಿ ಜನಸಂಖ್ಯೆ ಇರುವ ದೇಶದ ಎಲ್ಲ ನಗರಗಳಿಗೆ ಈ ಸೇವೆ ವಿಸ್ತರಿಸಲಾಗುತ್ತದೆ. ಈ ಮೂಲಕ ಮಹಿಳಾ ಸುರಕ್ಷತೆಗೆ ಕೇಂದ್ರ ಸಾರಿಗೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ರಾಜ್ಯಗಳ ಸಾರಿಗೆ ಸಂಸ್ಥೆಗಳ ವಾಹನಗಳಿಗೆ ಪ್ಯಾನಿಕ್ ಬಟನ್ ಹಾಗೂ ಸಿಸಿಟಿವಿ ಅಳವಡಿಸಲು ಸೂಚಿಸಲಾಗಿದೆ. ವಿದ್ಯುತ್ ಚಾಲಿತ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ಪ್ಯಾನಿಕ್ ಬಟನ್ ಹಾಗೂ ಸಿಸಿಟಿವಿ ಅಳವಡಿಸುವುದು ಕಡ್ಡಾಯವಿಲ್ಲ. ಈ ನೂತನ ಪಿಂಕ್ ಬಸ್ಗಳಲ್ಲೂ ಪ್ಯಾನಿಕ್ ಬಟನ್ ಹಾಗೂ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ. ಪಿಂಕ್ ಬಸ್ಗಳಲ್ಲಿ ಮಹಿಳೆಯರನ್ನೇ ನೇಮಕ ಮಾಡಿಕೊಳ್ಳುವ ಕಾರಣದಿಂದ ಉದ್ಯೋಗಾವಕಾಶ ಹೆಚ್ಚಲಿದ್ದು, ಮಹಿಳೆಯರು ಸುರಕ್ಷಿತವಾಗಿರಬಹುದೆಂದು ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.