ನವದೆಹಲಿ:ದೇಶದ ಕೆಲವು ರಾಜ್ಯಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ನಗರಗಳ ಕಂಟೈನ್ಮೆಂಟ್ ವ್ಯಾಪ್ತಿಯಲ್ಲಿ ಸೀಮಿತ ಲಾಕ್‌ಡೌನ್ ಜಾರಿಯಲ್ಲಿದೆ.
ಜುಲೈ 13 ರಿಂದ 23ರವರೆಗೆ ಪುಣೆ ಮತ್ತು ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಸ್ಥಗಿತದ ಅವಧಿಯಲ್ಲಿ ಕೇವಲ ಹಾಲು ಅಂಗಡಿ, ಔಷಧಾಲಯ, ವೈದ್ಯರ ಚಿಕಿತ್ಸಾಲಯ ಮತ್ತು ತುರ್ತು ಸೇವೆಗಳಿಗೆ ಮಾತ್ರ ವಿನಾಯ್ತಿ ನೀಡಲಾಗಿದೆ ಎಂದು ಹೇಳಿದೆ.
ಶುಕ್ರವಾರ ರಾತ್ರಿ 10 ರಿಂದ ಉತ್ತರಪ್ರದೇಶದಾದ್ಯಂತ 55 ಗಂಟೆಗಳ ಲಾಕ್‌ಡೌನ್ ಜಾರಿಗೆ ಬರಲಿದೆ. ಈ ಅವಧಿಯಲ್ಲಿ ತುರ್ತು ಮತ್ತು ಅಗತ್ಯ ಸೇವೆಗಳು ಮಾತ್ರ ಲಭ್ಯವಿರುತ್ತವೆ ಎಂದು ಇಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರ ಹೇಳಿದೆ.
ರಾಜ್ಯದಲ್ಲೂ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಹೀಗಾಗಿ ರಾಜ್ಯವ್ಯಾಪಿ ಭಾನುವಾರ ಲಾಕ್‌ಡೌನ್ ಮಾಡಲು ಸಿಎಂ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದರು. ನಾಳೆ ರಾತ್ರಿಯಿಂದ ಮುಂದಿನ 36 ಗಂಟೆಗಳ ಕಾಲ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರುತ್ತದೆ.
ಪಶ್ಚಿಮ ಬಂಗಾಳದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಾಣುತ್ತಿದೆ. 434 ಕಂಟೇನ್ಮೆಂಟ್ ವಲಯಗಳಲ್ಲಿ ಏಳು ದಿನಗಳ ಕಾಲ ಲಾಕ್‌ಡೌನ್ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯವು ಕಳೆದ 24 ಗಂಟೆಗಳಲ್ಲಿ ಒಂದೇ ದಿನ ಅತಿ ಹೆಚ್ಚು 1,088 ಕೋವಿಡ್ -19 ಸೋಂಕಿನ ಪ್ರಕರಣಗಳು ದಾಖಲಾಗಿವೆ.
ಲಾಕ್‌ಡೌನ್ ಹೇರಿಕೆಯ ಹೊರತಾಗಿಯೂ ದೇಶದಲ್ಲಿ ಹತ್ತಿರ 8,00,000 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದು ವಿಶ್ವದ ಮೂರನೇ ಅತಿಹೆಚ್ಚು ಸೋಂಕಿತರಿರುವ ರಾಷ್ಟ್ರವಾಗಿದೆ. ಅಮೆರಿಕ ಮತ್ತು ಬ್ರೆಜಿಲ್ ಬಳಿಕ ನಂತರದ ಸ್ಥಾನದಲ್ಲಿದೆ.
ಜನವರಿಯಲ್ಲಿ ಮೊದಲ ಪ್ರಕರಣ ಪತ್ತೆ ಆದಾಗಿನಿಂದ ಭಾರತದಲ್ಲಿ 21,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಫೆಡರಲ್ ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದೆ. ರಾಜಧಾನಿ ದೆಹಲಿ, ಮಹಾರಾಷ್ಟ್ರದೊಂದಿಗೆ ಮುಂಬೈ ಮತ್ತು ದಕ್ಷಿಣ ರಾಜ್ಯವಾದ ತಮಿಳುನಾಡಿನಲ್ಲಿ ಸುಮಾರು ಶೇ.60 ಪ್ರಕರಣಗಳಿವೆ.