ಕೊರ್ಬಾ (ಛತ್ತೀಸ್ಗಢ) :ನಾಣ್ಯ ಸಂಗ್ರಹಣೆ ಎನ್ನುವುದು ಕೆಲವರಿಗೆ ಅಭ್ಯಾಸವೇನೋ ಹೌದು. ಆದರೆ, ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ನಾಣ್ಯಗಳನ್ನು ಸಂಗ್ರಹ ಮಾಡಿರುವುದು ಸಾಮಾನ್ಯದ ಮಾತಂತೂ ಅಲ್ಲ. ಇಲ್ಲೋರ್ವ ವ್ಯಕ್ತಿ ಮೊಘಲ್ ಯುಗದಿಂದಲೂ ನಾಣ್ಯ ಸಂಗ್ರಹಣೆ ಮಾಡಿಕೊಂಡು ಬಂದಿದ್ದಾರೆ.
ಛತ್ತೀಸ್ಗಢದ ರಾಮ್ ಸಿಂಗ್ ಅಗರ್‌ವಾಲ್ ಅವರು ನಾಣ್ಯ ಸಂಗ್ರಹದಲ್ಲಿ ಹೆಚ್ಚು ಆಸಕ್ತಿ ಇರಿಸಿಕೊಂಡಿದ್ದು, ಈ ಹವ್ಯಾಸಕ್ಕಾಗಿ ಇವರು ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಈವರೆಗೆ ಖರ್ಚು ಮಾಡಿದ್ದಾರೆ. ನಾಣ್ಯಶಾಸ್ತ್ರಜ್ಞ ರಾಮ್ ಸಿಂಗ್ ಪ್ರಾಚೀನ ಕಾಲದ ನಾಣ್ಯಗಳನ್ನು ಒಳಗೊಂಡಿರುವ ಒಂದು ವಿಶಿಷ್ಟವಾದ ನಾಣ್ಯಗಳ ಸಂಗ್ರಹವನ್ನು ಹೊಂದಿದ್ದಾರೆ. ಇವರು ಕೊರ್ಬಾದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷರಾಗಿದ್ದು, 1970ರ ದಶಕದಲ್ಲಿ ಬ್ಯಾಂಕ್ ವ್ಯವಸ್ಥಾಪಕರಿಂದ ನಾಣ್ಯ ಸಂಗ್ರಹ ಮಾಡುವ ಬಗ್ಗೆ ಒಲವು ಉಂಟಾಯಿತು ಎನ್ನುತ್ತಾರೆ ಸಿಂಗ್.
ರಾಮ್ ಸಿಂಗ್ ತಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಯುಕೋ ಬ್ಯಾಂಕ್‌ಗೆ ಭೇಟಿ ನೀಡಿದ್ದರಂತೆ. ಅಲ್ಲಿ ಕಾಲಕಾಲಕ್ಕೆ ಬದಲಾದ ನಾಣ್ಯಗಳನ್ನು ಸಂಗ್ರಹಣೆ ಮಾಡಲಾಗಿತ್ತು. ಇದರಿಂದ ಪ್ರೇರಣೆಗೊಂಡ ಸಿಂಗ್ ತಾವೂ ಯಾಕೆ ಈ ರೀತಿ ಮಾಡಬಾರದು ಎಂದು ಅರಿತು ಅಲ್ಲಿಂದ ನಾಣ್ಯ ಸಂಗ್ರಹಣೆಯಲ್ಲಿ ಮುಂದಾಗಿದ್ದಾರೆ. ಅವರು ತಮ್ಮ ಮೊದಲ ನಾಣ್ಯವನ್ನು 1974 ರಲ್ಲಿ ಸಂಗ್ರಹ ಮಾಡಿದ್ದಾರೆ. ಇವರ ಸಂಗ್ರಹಾಗಾರದಲ್ಲಿ ಮೊಘಲ್ ಮತ್ತು ಬ್ರಿಟಿಷ್ ಕಾಲದಿಂದ ಹಿಡಿದು ಭಾರತ ಸರ್ಕಾರ ಹೊರಡಿಸಿದ 1000 ರೂಪಾಯಿ ನಾಣ್ಯಗಳನ್ನೂ ಕಾಣಬಹುದು.