ನವದೆಹಲಿ:ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ತನ್ನ ರಕ್ಕಸ ರೂಪ ಹೊರಹಾಕುತ್ತಿದ್ದು, ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಇದರಿಂದ ಹರಬರಲು ಭಾರತವೂ ಹರಸಾಹಸ ಪಡುತ್ತಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ನಮೋ ಮಾತನಾಡಿದರು.
ಇತ್ತೀಚೆಗಿನ ಜನತಾ ಕರ್ಫ್ಯೂ ಯಶಸ್ಸಿನಲ್ಲಿ ಪ್ರತಿಯೊಬ್ಬ ಭಾರತೀಯ ಕೊಡುಗೆ ಅಪಾರವಾಗಿದ್ದು, ಮಕ್ಕಳಿಂದ ಹಿಡಿದು ವೃದ್ಧರು ಇದರಲ್ಲಿ ಭಾಗಿಯಾಗಿದ್ದಾರೆ. ಸದ್ಯದಲ್ಲೇ ಭಾರತವೂ ಮಹತ್ವದ ನಿರ್ಧಾರವೊಂದು ತೆಗೆದುಕೊಳ್ಳಲಿದೆ. ಇಂದಿನ ಮಧ್ಯರಾತ್ರಿಯಿಂದ ಇಡೀ ದೇಶವೇ ಲಾಕ್ಡೌನ್ ಆಗಲಿದೆ. ದೇಶವನ್ನು ಕೊರೋನಾದಿಂದ ಬಚಾವ್ ಮಾಡಲು ನಾವು ಮನೆಯಲ್ಲೇ ಉಳಿಯಬೇಕಿದೆ ಎಂದರು.
ಮಧ್ಯರಾತ್ರಿಯಿಂದ ದೇಶಾದ್ಯಂತ ಲಾಕ್ಡೌನ್: ಮೋದಿ ಮಹಾಮಾರಿ ಕೊರೊನಾ ತಡೆಗಟ್ಟಲು ‘ಸಾಮಾಜಿಕ ಅಂತರವೊಂದೇ ಮಹತ್ವದ ನಿರ್ಧಾರವಾಗಿದ್ದು, ಎಷ್ಟೇ ಮುನ್ನಚ್ಚರಿಕೆ ಕ್ರಮ ಕೈಗೊಂಡರೂ ನಿತ್ಯ ವ್ಯಾಪಕವಾಗಿ ಹರಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಶ್ವದ ಸಮರ್ಥ ದೇಶಗಳನ್ನ ಕೊರೊನಾ ಮಹಾಮಾರಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿಸಿದ್ದು, ಎಲ್ಲರೂ ಒಗ್ಗಟ್ಟಿನಿಂದ ಮಹಾಮಾರಿ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದರು. ನೀವು ಈಗ ಎಲ್ಲಿದ್ದೀರಿ ಅಲ್ಲೇ ಇರಿ, ಮುಂದಿನ 21 ದಿನ ಯಾವುದೇ ಕಾರಣಕ್ಕೂ ಹೊರಬರಬೇಡಿ. ಜನತಾ ಕರ್ಫ್ಯೂಗಿಂತಲೂ ಇದು ಒಂದು ಹೆಜ್ಜೆ ಮುಂದೆ. ಮುಂದಿನ 21 ದಿನಗಳ ಕಾಲ ಮನೆಯಲ್ಲಿ ಇರಿ. ನಾನು ಈ ಮಾತು ಪ್ರಧಾನಿ ಅಲ್ಲ ನಿಮ್ಮ ಮನೆ ಸದಸ್ಯನಾಗಿ ಹೇಳುತ್ತಿದ್ದೇನೆ ಎಂದರು.