ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಉಚಿತ ಕರೆಂಟ್, ನೀರು ಹಾಗೂ ಬಸ್ಸಿನ ಸೌಲಭ್ಯವನ್ನು ನಿಲ್ಲಿಸುತ್ತಾರೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ದೆಹಲಿಯ ಜನತೆಯನ್ನು ಎಚ್ಚರಿಸಿದ್ದಾರೆ.
"ಬಿಜೆಪಿಗೆ ಮತ ಹಾಕಿದರೆ ಉಚಿತ ಕರೆಂಟ್, ಉಚಿತ ನೀರು ಹಾಗೂ ಬಸ್ಸಿನ ಸೌಲಭ್ಯವನ್ನು ನಿಲ್ಲಿಸಲಾಗುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಸಾಬೀತುಪಡಿಸಿದೆ, ಹೀಗಾಗಿ ಮತದಾರರು ಯೋಚಿಸಿ ಮತ ಹಾಕಿ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಗೆ 2020ರ ಪ್ರಣಾಳಿಕೆಯನ್ನು ಶುಕ್ರವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಬಿಜೆಪಿ, ರಾಜಧಾನಿಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಡವರಿಗೆ ಕೆ ಜಿ ಗೋಧಿಯನ್ನು 2 ರೂಗೆ ನೀಡುವುದಾಗಿ ಭರವಸೆಯನ್ನು ನೀಡಿದೆ, ಅಲ್ಲದೇ ಮಹಿಳಾ ಸುರಕ್ಷತೆ ,ಉದ್ಯೋಗದ ಕುರಿತು ಭರವಸೆಯನ್ನು ನೀಡಿದೆ. ಆದರೆ ಪ್ರಸ್ತುತ ಸರ್ಕಾರ ನೀಡಿರುವ ಉಚಿತ ಸೇವೆಗಳನ್ನು ಮುಂದುವರಿಸುವುದರ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
ಮುಂದಿನ ಐದು ವರ್ಷಗಳ ಕಾಲ ರಾಷ್ಟ್ರ ರಾಜಧಾನಿಯನ್ನು ಯಾರು ಆಳುವರು ಎಂಬುದನ್ನು ನಿರ್ಧರಿಸಲು ಫೆಬ್ರವರಿ 8 ರಂದು ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು,ಫೆಬ್ರವರಿ 11 ರಂದು ಮತ ಎಣಿಕೆ ನಡೆಯಲಿದೆ. ಆಡಳಿತಾರೂಡ ಎಎಪಿ ಅಧಿಕಾರಕ್ಕೆ ಮರಳಲು ದೃಢ ನಿಶ್ಚಯವನ್ನು ಹೊಂದಿದೆ. ಆದ್ರೆ ಇನ್ನೊಂದೆಡೆ 20 ವರ್ಷಗಳ ನಂತರ ದೆಹಲಿಯಲ್ಲಿ ಮುಖ್ಯಮಂತ್ರಿ ಸ್ಥಾನ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ.
ಸತತ 15 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಕಾಂಗ್ರೆಸ್ ಕೂಡಾ ತನ್ನ ಅಧಿಕಾರವನ್ನು ಮರಳಿ ಪಡೆಯಲು ಹಂಬಲಿಸುತ್ತಿದೆ.