ನವದೆಹಲಿ: ದೇಶದಲ್ಲಿ ಕೊರೊನಾ ಕಂಟಕ ಭೀತಿ ಹೆಚ್ಚಾಗುತ್ತಿದ್ದು, ಈ ನಡುವೆ ಇರಾನ್‌ನ ಟೆಹ್ರಾನ್ ಮತ್ತು ಶಿರಾಝ್ನಿಂದ 53 ಭಾರತೀಯರ ನಾಲ್ಕನೇ ಬ್ಯಾಚ್ ಭಾರತಕ್ಕೆ ಆಗಮಿಸಿದೆ.
ಈ ಬಗ್ಗೆ ತಿಳಿಸಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, 52 ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕ ಸೇರಿದಂತೆ ಒಟ್ಟು 53 ಜನರು ದೇಶಕ್ಕೆ ಮರಳಿ ಬಂದಿದ್ದಾರೆ. ಇದರೊಂದಿಗೆ ಒಟ್ಟು 389 ಭಾರತೀಯರು ಇರಾನ್‌ನಿಂದ ಭಾರತಕ್ಕೆ ಮರಳಿದಂತಾಗಿದೆ. ಇರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಮತ್ತು ಇರಾನ್ ಅಧಿಕಾರಿಗಳ ಪ್ರಯತ್ನಕ್ಕೆ ಧನ್ಯವಾದಗಳು ಎಂದು ಜೈಶಂಕರ್ ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಹೀಗಿದೆ...
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶ
ಇನ್ನು ದೇಶದಲ್ಲಿ ಈವರೆಗೆ ಒಟ್ಟು 110 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರಲ್ಲಿ 17 ವಿದೇಶಿ ಪ್ರಜೆಗಳೂ ಸೇರಿದ್ದಾರೆ. ಕರ್ನಾಟಕದಲ್ಲಿ ಒಟ್ಟು 7 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ ಒಟ್ಟು 32 ಪಾಸಿಟಿವ್ ಪ್ರಕರಣಗಳೊಂದಿಗೆ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಬಾಧಿತ ರಾಜ್ಯವಾಗಿದೆ. ಕೇರಳದಲ್ಲಿ ಒಟ್ಟು 25 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಮೂವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜಸ್ಥಾನದಲ್ಲಿ ಮೂವರು ಗುಣಮುಖ...
ಇನ್ನೊಂದೆಡೆ ರಾಜಸ್ಥಾನದಲ್ಲಿ ಮೂವರು ಕೊರೊನಾದಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು 13 ಜನರು ಕೊರೊನಾದಿಂದ ಮುಕ್ತಿ ಪಡೆದು ಮರುಜೀವ ಪಡೆದಿದ್ದಾರೆ.