ಮಥುರಾ (ಉತ್ತರ ಪ್ರದೇಶ):ಹಥ್ರಾಸ್ ಪ್ರಕರಣದ ತನಿಖೆ ವೇಗವಾಗಿ ನಡೆಯುತ್ತಿದೆ. ಇನ್ನೊಂದೆಡೆ ಹಥ್ರಾಸ್ಗೆ ತೆರಳುತ್ತಿದ್ದ ಪಿಎಫ್ಐ ಸಂಘಟನೆಯವರೆಂದು ಹೇಳಲಾದ ನಾಲ್ವರು ಮುಖಂಡರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದೆ.
ಚೀಫ್ ಜುಡಿಷಿಯಲ್ ಮಾಜಿಸ್ಟ್ರೇಟ್ ವ್ಯಕ್ತಿಗಳ ವಿಚಾರಣೆಗೆ ಅನುಮತಿ ನೀಡಿದ ಕಾರಣದಿಂದ ಹೈವೇ ಪೊಲೀಸ್ ಠಾಣೆಯಲ್ಲಿ ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿ ಮೂಲಗಳು ಮಾಹಿತಿ ನೀಡಿವೆ.
ವ್ಯಕ್ತಿಗಳನ್ನು ಕೇರಳದ ಮಲಪ್ಪುರಂ ಮೂಲದ ಸಿದ್ದೀಕ್ ಕಪ್ಪನ್, ಉತ್ತರ ಪ್ರದೇಶದ ಮುಜಾಫರ್ ನಗರದ ಅತಿಕ್ ಉರ್ ರೆಹಮಾನ್, ಬಹರೈಕ್ನ ಮಸೂದ್ ಅಹ್ಮದ್, ರಾಂಪುರದ ಆಲಂ ಎಂದು ಗುರುತಿಸಲಾಗಿದೆ.
ಸಿದ್ದೀಕ್ ಕಪ್ಪನ್ ದೆಹಲಿ ಮೂಲದ ಹಿರಿಯ ಪತ್ರಕರ್ತ ಎಂದು ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಮಾಹಿತಿ ನೀಡಿದ್ದು, ಹೆಚ್ಚಿನ ಮಾಹಿತಿಯನ್ನು ಜಾರಿ ನಿರ್ದೇನಾಲಯ ಕಲೆಹಾಕಿದೆ.
ಅಕ್ಟೋಬರ್ 4ರಂದು ಈ ನಾಲ್ವರೂ ವ್ಯಕ್ತಿಗಳನ್ನು ದೆಹಲಿಯಿಂದ ಹಥ್ರಾಸ್ಗೆ ತೆರಳುವ ವೇಳೆ ಮಥುರಾ ಮಠ ಟೋಲ್ ಪ್ಲಾಜಾ ಬಳಿ ವಶಕ್ಕೆ ಪಡೆಯಲಾಗಿತ್ತು. ಇದರ ಜೊತೆಗೆ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಲು ಸಾಧ್ಯವಾಗುವಂತಹ ಕೆಲವೊಂದು ವಸ್ತುಗಳು, ಮೊಬೈಲ್ ಫೋನ್, ಲ್ಯಾಪ್ಟಾಪ್, ಹಾಗೂ ಕೆಲವು ಬರಹಗಳನ್ನು ಜಪ್ತಿ ಮಾಡಲಾಗಿತ್ತು.
ವಿಚಾರಣೆ ನಂತರ ಇವರೆಲ್ಲರೂ ಪಿಎಫ್ಐ ಹಾಗೂ ಅದರ ಅಂಗಸಂಸ್ಥೆ ಸಿಎಫ್ಐನೊಂದಿಗೆ ಸಂಪರ್ಕ ಹೊಂದಿದ್ದರೆಂದು ತಿಳಿದುಬಂದಿದ್ದು, ಪೊಲೀಸರಿಂದ ಮತ್ತಷ್ಟು ತನಿಖೆ ನಡೆಯುತ್ತಿದೆ.