ಬುಡಾನ್ (ಉತ್ತರ ಪ್ರದೇಶ): ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಹೆಚ್‌ಸಿ) ರಾತ್ರಿ ವೇಳೆ ಜನಿಸಿದ ನಾಲ್ಕು ಶಿಶುಗಳು ಸಾವನ್ನಪ್ಪಿವೆ. ಇದಾದ ನಂತರ ಅನ್ಯಾಯಕ್ಕೊಳಗಾದ ನಾಲ್ಕು ಕುಟುಂಬದ ಸದಸ್ಯರು ಅಲ್ಲಿನ ನರ್ಸ್ ವಿರುದ್ಧ ಲಂಚದ ಆರೋಪ ಮಾಡಿದ್ದಾರೆ.
ಕಳೆದ ರಾತ್ರಿ ಇಸ್ಲಾಂನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಲ್ಕು ಶಿಶುಗಳು ಜನಿಸಿದಾಗಲೇ ಸಾವನ್ನಪ್ಪಿದ್ದು, ಅಧಿಕಾರಿಗಳು ಲಂಚ ತೆಗೆದುಕೊಳ್ಳುತ್ತಿರುವುದಲ್ಲದೇ, ಹೊರಗಿನಿಂದ ಔಷಧಿಗಳನ್ನು ಖರೀದಿಸಲು ಒತ್ತಾಯಿಸಿದ್ದಾರೆ ಎಂದು ಮೃತ ಶಿಶುಗಳ ಬಂಧುಗಳು ಆರೋಪಿಸಿದ್ದಾರೆ.
ಗಿರ್ಧರಪುರ ಗ್ರಾಮದ ನಿವಾಸಿ ಜೆಂಡರ್ ಪಾಲ್ ತನ್ನ ಗರ್ಭಿಣಿ ಪತ್ನಿ ಅನಿತಾಳನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆತಂದಿದ್ದಾನೆ. ನಂತರ ಒಂದು ಗಂಟೆಯ ಬಳಿಕ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಶಿಶು ಶೀಘ್ರದಲ್ಲೇ ಸತ್ತುಹೋಗಿದೆ. ಇದಾದ ನಂತರ ದಂಪತಿಗಳು ನರ್ಸ್ ಸರಿಯಿಲ್ಲ ಎಂದು ಆರೋಪಿಸಿದ್ದು, ನರ್ಸ್ಗೆ ಸೇವಾ ಶುಲ್ಕವಾಗಿ 400 ರೂ. ಪಾವತಿಸಿರುವುದಾಗಿ ತಿಳಿಸಿದ್ದಾರೆ.
ಅದೇ ರೀತಿ, ಅಲಿನಗರ ನಿವಾಸಿ ಅನಿತಾ ಎಂಬಾಕೆ ಜನ್ಮ ನೀಡಿದ ಗಂಡು ಮಗು ಮೃತಪಟ್ಟಿದ್ದು, ಮಹಿಳೆಯ ಪತಿ ಜಿತೇಂದ್ರ ನರ್ಸ್ಗೆ 1,500 ರೂ.ಗಳನ್ನು ಪಾವತಿಸಿದ್ದು, ಎಲ್ಲಾ ಔಷಧಿಗಳನ್ನು ಹೊರಗಿನಿಂದ ತರುವಂತೆ ನರ್ಸ್ ಆದೇಶಿಸಿದ್ದಾಗಿ ಆರೋಪಿಸಿದ್ದಾರೆ.
ತನ್ನ ಮಗ ಕೂಡ ಹುಟ್ಟಿದ ಕೂಡಲೇ ಸಾವನ್ನಪ್ಪಿದ್ದರಿಂದ ಬಾಲಪುರ ಗ್ರಾಮದ ಮತ್ತೊಬ್ಬ ಮಹಿಳೆ ಕುಸುಮಾ, ಅಧಿಕಾರಿಗಳ ಬೇಜಾಬ್ದಾರಿ ವರ್ತನೆ ಬಗ್ಗೆ ದೂಷಿಸಿದ್ದಾರೆ. ಪತಿ ಉಮೇಶ್ ಅವರು ನರ್ಸ್ಗೆ 1,200 ರೂ.ಪಾವತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ರೀತಿ ಸಖಾಮೈ ಗ್ರಾಮದ ಮಾಲಾ ಕೂಡ ಕಳೆದ ರಾತ್ರಿ ತನ್ನ ಮಗುವನ್ನು ಕಳೆದುಕೊಂಡಿದ್ದಾರೆ.
ಮೂಲಗಳ ಪ್ರಕಾರ, ಆಸ್ಪತ್ರೆಯಲ್ಲಿ ಸಹಾಯಕ ನರ್ಸ್ (ಸೂಲಗಿತ್ತಿ) ಈಗಾಗಲೇ ನಿವೃತ್ತರಾಗಿದ್ದರೂ ಇನ್ನೂ ಹೆರಿಗೆಗೆ ಸಹಾಯ ಮಾಡುತ್ತಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿ ನಿಜವಾದ ಶಿಶುಗಳ ಸಾವಿನ ಸಂಖ್ಯೆ ಹೆಚ್ಚಾಗಿದೆ. ಅಧಿಕಾರಿಗಳು ತಾವು ಈ ಪ್ರಕರಣದಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಲು ದಾಖಲೆಗಳಲ್ಲಿ ನೋಂದಾಯಿಸುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಇದಿಷ್ಟೇ ಅಲ್ಲದೇ, ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಆಗಾಗ ಮನೆಯಿಂದಲೇ ಕೆಲಸ ಮಾಡುತ್ತಿದ್ದರು ಮತ್ತು ಕೇಂದ್ರಕ್ಕೆ ಭೇಟಿ ನೀಡಲ್ಲ ಎಂದು ಬಲ್ಲ ಮೂಲಗಳು ಬಹಿರಂಗಪಡಿಸಿವೆ. ಅಲ್ಲದೇ ಕಳೆದ ರಾತ್ರಿ ಸಹ, ನಾಲ್ಕು ಶಿಶುಗಳು ಮೃತಪಟ್ಟಾಗ ಅಧಿಕಾರಿ ಆಸ್ಪತ್ರೆಯಲ್ಲಿ ಇರಲಿಲ್ಲ ಎಂಬುದು ತಿಳಿದುಬಂದಿದೆ.