ನವದೆಹಲಿ:ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಆಗಸ್ಟ್ 5ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇದೀಗ ಇದೇ ವಿಷಯವಾಗಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮಾತನಾಡಿದ್ದು, ರಾಮ ಮಂದಿರ ನಿರ್ಮಾಣಕ್ಕಾಗಿ ಈ ಹಿಂದೆ ಅಡಿಪಾಯ ಹಾಕಲಾಗಿದೆ ಎಂದು ಹೇಳಿದ್ದಾರೆ. ರಾಜೀವ್ ಗಾಂಧಿ ಅವರು ಈ ಹಿಂದೆ ಈ ಕೆಲಸ ಮಾಡಿದ್ದು, ಅವರು ಕೂಡ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರು ಎಂದು ತಿಳಿಸಿದ್ದಾರೆ.
ರಾಮ ಮಂದಿರ ಕುರಿತು ದಿಗ್ವಿಜಯ್ ಸಿಂಗ್ ಮಾತು ಆಗಸ್ಟ್ 5ರಂದು ನಡೆಯುತ್ತಿರುವ ಭೂಮಿ ಪೂಜೆ ಕಾರ್ಯಕ್ರಮದ ಮುಹೂರ್ತ ಅಶುಭವಾಗಿದ್ದು, ಸತಾತನ ಧರ್ಮದ ನಿಯಮ ನಿರ್ಲಕ್ಷಿಸಲಾಗಿದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ದಿನಾಂಕದ ಬಗ್ಗೆ ಮತ್ತೊಮ್ಮೆ ಮರು ಪರಿಶೀಲನೆ ನಡೆಸಬೇಕು ಎಂದಿರುವ ದಿಗ್ವಿಜಯ್ ಸಿಂಗ್, ನೂರಾರು ವರ್ಷದ ಹೋರಾಟದ ಫಲವಾಗಿ ಈ ದೇವಾಲಯ ನಿರ್ಮಾಣಗೊಳ್ಳುತ್ತಿದ್ದು, ಅದರ ಬಗ್ಗೆ ಪ್ರಧಾನಿಯವರು ಮತ್ತೊಮ್ಮೆ ಪರಾಮರ್ಶೆ ನಡೆಸಬೇಕು ಎಂದಿದ್ದಾರೆ. ಜತೆಗೆ ಬಿಜೆಪಿ ಅನೇಕ ಮುಖಂಡರು ಕೋವಿಡ್ ಸೋಂಕಿಗೊಳಗಾಗುತ್ತಿದ್ದು, ಭೂಮಿ ಪೂಜಾ ಕಾರ್ಯಕ್ರಮ ಮುಂದೂಡಿಕೆ ಮಾಡಬೇಕು ಎಂದಿದ್ದಾರೆ.
ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿದ್ದ ಅರ್ಚಕ, ಗೃಹ ಸಚಿವ ಅಮಿತ್ ಶಾ, ಮಧ್ಯಪ್ರದೇಶ ಸಿಎಂ, ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೂ ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.