ನವದೆಹಲಿ:ಆಹಾರ ಮತ್ತು ಪಡಿತರ ಸಚಿವಾಲಯವು ಇತ್ತೀಚೆಗೆ ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿ ದೇಶದಲ್ಲಿ 53 ಮಿಲಿಯನ್ ಟನ್‌ಗಳಷ್ಟು ಧಾನ್ಯ ಸಂಗ್ರಹವಿದೆ ಎಂದು ಸ್ಪಷ್ಟಪಡಿಸಿತ್ತು. ಹೇಳಿಕೆಯ ಪ್ರಕಾರ ಈ ಪೈಕಿ 30 ಮಿಲಿಯನ್ ಟನ್ ಅಕ್ಕಿಯಾಗಿದ್ದರೆ, ಉಳಿದವು ಗೋಧಿಯಾಗಿದೆ. ಇದು ಸಾಮಾನ್ಯವಾಗಿ ನಾವು ಸಂಗ್ರಹಿಸಿರುವ ಬಫರ್ ಸ್ಟಾಕ್ ಎಂಬುದನ್ನು ನಾನು ಇಲ್ಲಿ ಸ್ಪಷ್ಟಪಡಿಸಬೇಕಾಗಿದೆ. 7.6 ಮಿಲಿಯನ್ ಟನ್ ಅಕ್ಕಿ ಮತ್ತು 13.8 ಮಿಲಿಯನ್ ಟನ್ ಗೋಧಿ ಅಂದರೆ ಒಟ್ಟು ಸುಮಾರು 21 ಮಿಲಿಯನ್ ಟನ್ ಆಹಾರ ಧಾನ್ಯಗಳನ್ನು ನಾವು ಹೊಂದಿದ್ದೇವೆ. ಆದರೆ, ಇದೇ ವೇಳೆ ಭಾರತದಲ್ಲಿ ಹಸಿವಿನಿಂದಾಗಿ ಆಹಾರವನ್ನು ಬಯಸುತ್ತಿರುವ ಜನರ ಸಂಖ್ಯೆಯು 200 ಮಿಲಿಯನ್ ಅಥವಾ 20 ಕೋಟಿ ಆಗಿರಲಿದೆ ಎಂದು ಊಹಿಸಲಾಗಿದೆ.
ಇದು ಪ್ರತಿ ವರ್ಷದ ಭಾರತದಲ್ಲಿ ಕಂಡುಬರುತ್ತಿರುವ ಆಹಾರ ಭದ್ರತೆ ಸಮಸ್ಯೆ. ಬಡವರ ಮನೆಗಳಲ್ಲಿ ಇರಬೇಕಾದ ಸಂಗ್ರಹವು ಗೋದಾಮುಗಳಲ್ಲಿ ಕೊಳೆಯುತ್ತಿರುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಹಿಂಗಾರು ಬೆಳೆ ಕಟಾವು ಆಗಿ, ಅದರ ಸಂಗ್ರಹವೂ ನಡೆಯಲಿದೆ. 2019-20ರ ಅಂದಾಜಿನ ಪ್ರಕಾರ, ಒಟ್ಟು ಆಹಾರ ಉತ್ಪಾದನೆಯು ದೇಶದಲ್ಲಿ 292 ಮಿಲಿಯನ್ ಟನ್ ದಾಖಲೆಯಾಗಲಿದೆ. ಇದು ಕಳೆದ ವರ್ಷ ಉತ್ಪಾದನೆಯಾದ ಆಹಾರ ಧಾನ್ಯಕ್ಕೆ ಹೋಲಿಸಿದರೆ 6.74 ಮಿಲಿಯನ್ ಟನ್ ಹೆಚ್ಚಳವಾಗಿದೆ.
ಈಗ ನಮ್ಮಲ್ಲಿ ಕೋವಿಡ್ 19 ಮತ್ತು ಹಸಿವು ಎರಡೂ ಜೊತೆಯಾಗಿವೆ. ಇದೊಂದು ಮಾರಣಾಂತಿಕ ಸಂಯೋಜನೆ. ಅದರಲ್ಲೂ ವಿಶೇಷವಾಗಿ ಬಡವರಿಗಂತೂ ಇದು ಅತ್ಯಂತ ಮಾರಕ. ನಮ್ಮ ಜನರು ಮತ್ತು ಸಾರ್ವಜನಿಕ ಸೇವೆಗಳನ್ನು ಸರಿಯಾಗಿ ಗುರುತಿಸಿದರೆ, ನಾವು ಎಲ್ಲರಿಗೂ ಆಹಾರ ಒದಗಿಸಬಹುದು. ಆಗ ಅವರನ್ನೂ ಕೋವಿಡ್ 19 ನಿಂದ ಕೂಡ ರಕ್ಷಿಸಬಹುದು.
ಇದಕ್ಕೆ ಪ್ರಮುಖವಾಗಿ ಸಾರ್ವಜನಿಕ ಪಡಿತರ ವ್ಯವಸ್ಥೆ ಮತ್ತು ಅಂಗನವಾಡಿ ವ್ಯವಸ್ಥೆಯನ್ನು ನಾವು ಬಳಸಿಕೊಳ್ಳಬೇಕಿದೆ. ಈ ವ್ಯವಸ್ಥೆಯನ್ನು ನಾವು ಈಗಾಗಲೇ ರೂಪಿಸಿದ್ದೇವೆ. ಕಳೆದ 40 ವರ್ಷಗಳಲ್ಲಿ ಈ ವ್ಯವಸ್ಥೆಯಲ್ಲಿ ಸಿಬ್ಬಂದಿಯನ್ನು ನೇಮಿಸಿಕೊಂಡು ತರಬೇತಿ ನೀಡಿದ್ದೇವೆ. ಈ ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಅಂಗನವಾಡಿ ಸಿಬ್ಬಂದಿ ಇರುತ್ತಾರೆ. ಇಡೀ ದೇಶದಲ್ಲಿರುವ ಅಂಗನವಾಡಿ ಸಿಬ್ಬಂದಿಯ ಸಂಖ್ಯೆ 1.7 ಮಿಲಿಯನ್ ಆಗಿದ್ದು, ಇದು ನಮ್ಮ ದೇಶದ ಒಟ್ಟು ಸೇನಾ ಸಿಬ್ಬಂದಿಗಿಂತಲೂ ಹೆಚ್ಚಿದೆ. ಇವರು ಒಂದು ರೀತಿಯಲ್ಲಿ ಸಾಮಾಜಿಕ ಯೋಧರಂತೆ ಕಾರ್ಯನಿರ್ವಹಿಸುತ್ತಾರೆ.
ಕೋವಿಡ್ 19 ವಿಪತ್ತಿನಿಂದಾಗಿ ಇಡೀ ದೇಶ ಲಾಕ್‌ಡೌನ್ ಆಗಿದ್ದರೆ, ವಲಸಿಗರಿಗೆ ಅದರಲ್ಲೂ ಮುಖ್ಯವಾಗಿ ಅಸಂಘಟಿತ ವಲಯದ ಜನರಲ್ಲಿ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಕೋವಿಡ್ 19 ತಡೆಯುವುದಕ್ಕೆ ಪ್ರಮುಖವಾಗಿ ಜನಸಂಚಾರವನ್ನೇ ನಿಷೇಧಿಸಬೇಕು. ಆದರೆ ಭಾರತದ ಅಸಂಘಟಿತ ವಲಯದ ಅಸ್ತಿತ್ವವಿರುವುದೇ ವಲಸೆಯಲ್ಲಿ ಎಂಬುದು ವಿಪರ್ಯಾಸವೇ ಸರಿ. ಇವರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಲಸೆ ತೆರಳುವ ಮೂಲಕವೇ ತಮ್ಮ ಜೀವನವನ್ನು ಕಂಡುಕೊಳ್ಳುತ್ತಾರೆ. ಇವರು ವಲಸೆ ಹೋಗುವುದಕ್ಕೆ ಮೂಲ ಕಾರಣವೇ ಹಸಿವು. ಈ ಸಮಸ್ಯೆಯನ್ನು ಪರಿಹರಿಸುವುದು ಸುಲಭದ ಮಾತೇನಲ್ಲ. ಹೀಗಾಗಿ, ನಾವು ಈ ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಯನ್ನು ಪರಿಹರಿಸಬೇಕಿದೆ. ಈ ಸನ್ನಿವೇಶದಲ್ಲಿ ಹಸಿವು ಎಂಬುದು ಅತ್ಯಂತ ಪ್ರಮುಖ ಸಂಗತಿ. ಲಸಿಕೆಯೇ ಇಲ್ಲದ ಈ ಕೋವಿಡ್ 19 ಹರಡುವುದನ್ನು ತಡೆಯುವುದರ ಜೊತೆಗೆ ಈ ಸಮಸ್ಯೆಯನ್ನು ನೀಗಿಸುವುದು ಹೇಗೆ ಸಾಧ್ಯ ಎಂಬ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗಬೇಕಿದೆ.
ಸಾಮಾನ್ಯವಾಗಿ, ಈ ಸಂಕಷ್ಟದ ಸನ್ನಿವೇಶದಲ್ಲಿ ಪ್ರಧಾನಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ. ಪಡಿತರ ಮತ್ತು ಅಂಗನವಾಡಿ ಸಿಬ್ಬಂದಿ ಮತ್ತು ಮೂಲಸೌಕರ್ಯವನ್ನು ವೈದ್ಯಕೀಯ ಮತ್ತು ಮಾನವ ಸಂಪನ್ಮೂಲದ ಜೊತೆಗೇ ಸೂಕ್ತ ಪ್ರಮಾಣದಲ್ಲಿ ಬಳಸಿಕೊಳ್ಳಬೇಕಿದೆ. ಇವರು ಈ ರಣಾಂಗಣದಲ್ಲಿ ಯೋಧರಾಗಿ ಕಾರ್ಯನಿರ್ವಹಿಸುತ್ತಾರೆ. ಈ ಕಾರ್ಯತಂತ್ರದ ಮೂಲ ಅಂಶವೇ ಜನರನ್ನು ಸೂಕ್ತವಾಗಿ ನಿಯಂತ್ರಿಸುವುದಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಈ ಸಮಯದಲ್ಲಿ ಉತ್ತಮ ಸಂವಹನವನ್ನು ನಿರ್ವಹಿಸಬೇಕಿದೆ. ಎಫ್‌ಸಿಐ ಸಂಘಟನೆಗಳು ಆಹಾರ ಧಾನ್ಯಗಳನ್ನು ಸೂಕ್ತವಾಗಿ ಸಾಗಣೆ ಮಾಡಬೇಕು ಮತ್ತು ಸೂಕ್ತ ಸಾಲದ ಸೌಲಭ್ಯವನ್ನು ಆರ್‌ಬಿಐ ಒದಗಿಸಬೇಕು ಮತ್ತು ರಾಜ್ಯದ ಸಂಸ್ಥೆಗಳು ಸಾರಿಗೆ ವ್ಯವಸ್ಥೆ ಮತ್ತು ಗ್ರಾಮ ಮಟ್ಟದಲ್ಲಿ ವಿತರಣೆ ವ್ಯವಸ್ಥೆಯನ್ನು ನಿರ್ವಹಿಸಬೇಕು.
ಮುಂದಿನ ದಿನಗಳಲ್ಲಿ ವಲಸಿಗರ ಸ್ಥಳಾಂತರದ ವಿಚಾರದಲ್ಲಿ ನಮ್ಮ ಕೇಂದ್ರ ಮತ್ತು ರಾಜ್ಯದ ನಾಯಕರು ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಇದು ಅವಲಂಬಿಸಿರುತ್ತದೆ. ಐಸಿಎಂಆರ್, ವಿರಾಲಾಜಿಕ್ ಮತ್ತು ಇತರ ಆರೋಗ್ಯ ಪರಿಣಿತರ ಸಲಹೆಯ ಮೇರೆಗೆ ಸರ್ಕಾರಗಳು ಈ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಇದು ಅತ್ಯಂತ ಸೂಕ್ಷ್ಮವಾದ ಸಮತೋಲನದ ನಿರ್ಧಾರವಾಗಿರುತ್ತದೆ.
ಈ ಹಿಂದೆ ಬರ ಪರಿಸ್ಥಿತಿಯಲ್ಲಿ ನಾವು ಕೈಗೊಂಡ ಕ್ರಮಗಳಂತೆಯೇ ಆಯ್ದ ಪ್ರದೇಶಗಳಲ್ಲಿ ಉಚಿತವಾಗಿ ಆಹಾರ ಧಾನ್ಯಗಳನ್ನು ಒದಗಿಸಬೇಕು. ನಗರಗಳ ಕೊಳಗೇರಿಗಳು ಮತ್ತು ಕುಗ್ರಾಮಗಳಲ್ಲಿ ವಿಶೇಷವಾಗಿ ಈ ವ್ಯವಸ್ಥೆಯನ್ನು ನಾವು ಒದಗಿಸಬೇಕಿದೆ. ಅಲ್ಲದೆ, ವಲಸಿಗರು ಮತ್ತು ಹಸಿದವರು ಎಲ್ಲಿದ್ದಾರೆ ಎಂದು ಹುಡುಕುವ ಕೆಲಸವೂ ಆಗಬೇಕಿದೆ. ಇದರಿಂದ ಈ ಸಮಯದಲ್ಲಿ ನಮ್ಮ ದೇಶದ ಹಸಿವಿನ ತೀವ್ರತೆಯ ವ್ಯಾಪ್ತಿಯೂ ಕಂಡುಬರುತ್ತದೆ. ಅಲ್ಲದೆ, ಈ ಮೂಲಕ ನಾವು ಬಡವರಿಗೆ ಮತ್ತು ಹಸಿದವರಿಗೆ ಆಹಾರ ಮತ್ತು ಸ್ಥೈರ್ಯವನ್ನು ಕೂಡ ಸ್ವಯಂಪ್ರೇರಿತವಾಗಿ ಒದಗಿಸುತ್ತೇವೆ. ಹಸಿವು ಎಲ್ಲೆಡೆ ವ್ಯಾಪಿಸುತ್ತದೆ. ಹೀಗಾಗಿ ಆಹಾರ ಕೂಡ ಎಲ್ಲೆಡೆ ತಲುಪಬೇಕಿದೆ. ನಗರದ ಪ್ರದೇಶಗಳು, ಗ್ರಾಮೀಣ ಪ್ರದೇಶಗಳ ಬಂಜರು ಭೂಮಿಗಳಲ್ಲಿ ಮತ್ತು ಕೃಷಿ ಪ್ರದೇಶಗಳು, ಬುಡಗಕಟ್ಟು ಪ್ರದೇಶಗಳಲ್ಲಿ, ಬರ ಪೀಡಿತ ಮತ್ತು ಮರುಭೂಮಿ ಪ್ರದೇಶಗಳಲ್ಲಿ ಕೂಡ ಹಸಿವು ತಾಂಡವವಾಡಬಹುದು. ಈ ಮೂಲಕ, ನಾವು ದೇಶದಲ್ಲಿ ಅಂದಾಜು 20 ಕೋಟಿಯಷ್ಟಿರುವ ಹಸಿದ ಜನರಿಗೆ ಆಹಾರವನ್ನು ಒದಗಿಸಬಹುದು.