ನವದೆಹಲಿ: ಮಾಜಿ ಕೇಂದ್ರ ಸಚಿವ ಹಾಗೂ ಆರ್ಜೆಡಿ ನಾಯಕ ರಘುವಂಶ ಪ್ರಸಾದ್ (74) ಸಿಂಗ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಜೂನ್ನಲ್ಲಿ ಇವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಗುಣಮುಖರಾಗಿದ್ದರು. ಒಂದು ವಾರದ ಹಿಂದೆ ಕೊರೊನಾ ನಂತರದ ಅನಾರೋಗ್ಯದ ಕಾರಣದಿಂದ ಏಮ್ಸ್ಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.
ಯುಪಿಎ ಸರ್ಕಾರದಲ್ಲಿ 2004ರಿಂದ 2009ರವರೆಗೆ ಕೇಂದ್ರ ಸಚಿವರಾಗಿದ್ದ ಅವರು ಕೆಲವು ದಿನಗಳ ಹಿಂದಷ್ಟೇ ಆರ್ಜೆಡಿ ಪಕ್ಷದ ಸದಸ್ಯತ್ವ ತೊರೆಯುವ ನಿರ್ಧಾರ ಮಾಡಿ ಲಾಲೂ ಪ್ರಸಾದ್ ಯಾದವ್ಗೆ ಪತ್ರ ಬರೆದಿದ್ದರು. ಈ ಪತ್ರ ಕೆಲವು ರಾಜಕೀಯ ಮೇಲಾಟಗಳಿಗೆ ಕಾರಣವಾಗಿತ್ತು.
ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಬಹುಕಾಲದ ಆಪ್ತರಾಗಿದ್ದ ಇವರ ಅಗಲಿಕೆಗೆ ಹಲವು ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ರಘುವಂಶ್ ಪ್ರಸಾದ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಟ್ವೀಟ್ ಮಾಡಿದ ಲಾಲೂ ಪ್ರಸಾದ್ ಯಾದವ್ ''ಪ್ರಿಯ ರಘುವಂಶ್ ಬಾಬು, ನಿಮಗೇನಾಯ್ತು..?, ಮೊನ್ನೆಯಷ್ಟೇ ನೀವೆಲ್ಲೂ ಹೋಗಬಾರದೆಂದು ಹೇಳಿದ್ದೆ, ಆದರೆ ನೀವು ತುಂಬಾ ದೂರ ಹೋಗಿಬಿಟ್ಟಿದ್ದೀರಿ. ನಾನು ಮೌನವಾಗಿದ್ದು, ದುಃಖಿತನಾಗಿದ್ದಾನೆ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ'' ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಕೂಡಾ ರಘುವಂಶ್ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದು, ಅವರ ಅಗಲಿಕೆಯಿಂದ ಬಿಹಾರಕ್ಕೆ ಹಾಗೂ ದೇಶದ ರಾಜಕೀಯಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.