ನವದೆಹಲಿ:ಮಾಜಿ ರಾಷ್ಟ್ರಪತಿ, ರಾಜಕೀಯ ಧುರೀಣ ಪ್ರಣಬ್ ಮುಖರ್ಜಿ ಅವರು 84ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು, ದೇಶಾದ್ಯಂತ 7 ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಅವರ ಅಂತ್ಯಕ್ರಿಯೆಯನ್ನು ಇಂದು ನಡೆಸಲು ನಿರ್ಧರಿಸಲಾಗಿದೆ.
ಅನಾರೋಗ್ಯದ ಕಾರಣ ಬರೋಬ್ಬರಿ 21 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿನ್ನೆ ಕೊನೆಯುಸಿರೆಳೆದಿದ್ದಾರೆ. ದೇಶದ 13ನೇ ರಾಷ್ಟ್ರಪತಿ, ಕಾಂಗ್ರೆಸ್ನ ಟ್ರಬಲ್ ಶೂಟರ್, ಚಾಣಾಕ್ಷ ರಾಜಕಾರಣಿ ಎಂಬ ಹೆಸರು ಗಳಿಸಿದ್ದ ಅವರ ನಿಧನಕ್ಕೆ ಇಡೀ ದೇಶ ತೀವ್ರ ಸಂತಾಪ ಸೂಚಿಸಿದೆ. ಭಾರತ ರತ್ನ ಪುರಸ್ಕೃತ ಪ್ರಣಬ್ ಮುಖರ್ಜಿ ನಿಧನಕ್ಕೆ ಗೌರವಾರ್ಥವಾಗಿ ದೇಶಾದ್ಯಂತ ಏಳು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಹೀಗಾಗಿ ದೇಶದೆಲ್ಲೆಡೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ. ಇಂದಿನಿಂದ ಸೆಪ್ಟೆಂಬರ್ 6ರವರೆಗೆ ಶೋಕಾಚರಣೆ ಜಾರಿಯಲ್ಲಿರಲಿದೆ.