ಗಾಂಧಿನಗರ: ಕಸ್ಟಡಿಯಲ್ಲಿದ್ದ ಆರೋಪಿಯ ಸಾವಿನ ಪ್ರಕರಣದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಜಾಮ್ನಗರ್ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಕಳೆದ ವಾರವಷ್ಟೇ ಭಟ್, ಪ್ರಕರಣ ಸಂಬಂಧ 11 ಹೆಚ್ಚುವರಿ ಸಾಕ್ಷಿಗಳನ್ನು ಪರೀಕ್ಷೆಗೊಳಪಡಿಸಬೇಕು ಎಂದು ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈಗಾಗಲೆ ತ್ರಿಸದಸ್ಯರ ಪೀಠ ಈ ಮನವಿ ತಿರಸ್ಕರಿಸಿದೆ. ಹಾಗಾಗಿ ಭಟ್ ಮನವಿಯನ್ನು ಪುರಸ್ಕರಿಸಲಾಗಿಲ್ಲ ಎಂದು ನ್ಯಾ. ಇಂದಿರಾ ಬ್ಯಾನರ್ಜಿ ಹಾಗೂ ಅಜಯ್ ರಸ್ತೋಗಿ ಅವರ ಪೀಠ ಹೇಳಿತ್ತು.
ಇಂದು ಜಾಮ್ನಗರ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟಿಸಿ, ಆದೇಶ ನೀಡಿದೆ.
ಭಟ್ ಗುಜರಾತ್ನ ಜಾಮ್ನಗರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವೇಳೆ, ಕೋಮು ಗಲಭೆ ಸಂಬಂಧ 100 ಮಂದಿಯನ್ನು ವಶಕ್ಕೆ ಪಡೆದಿದ್ದರು. ಇದರಲ್ಲಿ ಓರ್ವ ಆರೋಪಿ ಬಿಡುಗಡೆಯಾದ ಬಳಿಕ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.
2011ರಲ್ಲಿ ಮೇಲಧಿಕಾರಿಗಳ ಅನುಮತಿ ಪಡೆಯದೇ ರಜೆ ತೆಗೆದುಕೊಂಡಿದ್ದಲ್ಲದೆ, ಸರ್ಕಾರಿ ವಾಹನವನ್ನ ದುರ್ಬಳಕೆ ಮಾಡಿಕೊಂಡಿದ್ದರಿಂದ ಭಟ್ ಅವರನ್ನು ಅಮಾನತು ಮಾಡಲಾಗಿತ್ತು. 2015ರಲ್ಲಿ ಕಸ್ಟಡಿಯಲ್ಲಿದ್ದ ಆರೋಪಿ ಸಾವಿನ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿತ್ತು.
2002ರ ಗೋದ್ರಾ ಹತ್ಯಾಕಾಂಡದಲ್ಲಿ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪಾತ್ರವಿದೆ ಎಂದು ಭಟ್ 2011ರಲ್ಲಿ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದರು.