ನವದೆಹಲಿ: ಮಾಜಿ ಐಪಿಎಸ್ ಅಧಿಕಾರಿ, ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಅಣ್ಣಾಮಲೈ ಇಂದು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿ ಸೇರ್ಪಡೆಗೊಂಡಿದ್ದು, ಈ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ದೆಹಲಿಯ ಪ್ರಧಾನ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಮುರಳೀದರ್ ರಾವ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಅವರ ಸಮ್ಮುಖದಲ್ಲಿ ಕಮಲ ಮುಡಿದರು.
ಅಣ್ಣಾಮಲೈ ಅಧಿಕಾರಿಯಾಗಿದ್ದ ವೇಳೆ ಪ್ರಾಮಾಣಿಕತೆ ಹಾಗೂ ನಿಷ್ಠುರ ಕಾರ್ಯದಿಂದ ಮನೆ ಮಾತಾಗಿದ್ದರು. ಅವರು ಪಕ್ಷಕ್ಕೆ ಸೇರಿಕೊಳ್ಳುತ್ತಿರುವುದು ಸಂತೋಷ ನೀಡಿದೆ ಎಂದರು. ಪೊಲೀಸ್ ಇಲಾಖೆ ರೀತಿಯಲ್ಲಿ ರಾಜಕೀಯದಲ್ಲೂ ಅವರು ಜನಸೇವೆ ಮಾಡಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಳ್ಳಲಿದ್ದಾರೆ ಎಂದು ಮುರುಳೀಧರ್ ರಾವ್ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಅಣ್ಣಾಮಲೈ, ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಪರ ಕೆಲಸ ಹಾಗೂ ಕಾರ್ಯವೈಖರಿ ಜತೆಗೆ ದೇಶ ಚುಕ್ಕಾಣಿ ಹಿಡಿದಾಗಿನಿಂದಲೂ ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರ ನಿಜಕ್ಕೂ ಮೆಚ್ಚುವಂತಹದ್ದು. ಹೀಗಾಗಿ ನಾನು ಬಿಜೆಪಿ ಸೇರಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ರಾಷ್ಟ್ರೀಯವಾದಿ ಪಕ್ಷವಾಗಿದ್ದು, ಅದಕ್ಕೆ ಪ್ರಾಶಸ್ತ್ಯ ನೀಡುವ ನಾನು ರಾಜಕೀಯಕ್ಕೆ ಎಂಟ್ರಿ ನೀಡಿದ್ದೇನೆ ಎಂದಿದ್ದಾರೆ.
ತಮಿಳುನಾಡು ಬಿಜೆಪಿ ಸೇರಿಕೊಂಡಿರುವ ಅಣ್ಣಾಮಲೈ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದು, ತಮಿಳರ ನಾಡಿನಲ್ಲಿ ಕಮಲ ಅರಳಿಸುವ ಭರವಸೆ ನೀಡಿದ್ದಾರೆ.
ಜೆಪಿ ನಡ್ಡಾ ಭೇಟಿ ಮಾಡಿದ ಅಣ್ಣಾಮಲೈ
ಭಾರತೀಯ ಜನತಾ ಪಾರ್ಟಿ ಸೇರಿದ ಬಳಿಕ ಅಣ್ಣಾಮಲೈ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನ ಭೇಟಿ ಮಾಡಿದರು. ಈ ವೇಳೆ ಅವರಿಗೆ ಬಿಜೆಪಿ ಶಾಲು ಹಾಕುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡರು.