ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಹಾವಳಿ ತೀವ್ರವಾಗುತ್ತಿದ್ದು, ಪಶ್ಚಿಮ ದೆಹಲಿಯ ಪಟೇಲ್ ನಗರದ ಕೌನ್ಸಿಲರ್ ಹಾಗೂ ಮುನಿಸಿಪಲ್ ಕಾರ್ಪೋರೇಷನ್ ಆಫ್ ದೆಹಲಿಯ ಮಾಜಿ ಉಪಮೇಯರ್ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಪೂರ್ಣಿಮಾ ವಿದ್ಯಾರ್ಥಿ, ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ರಾಜೇಂದ್ರ ನಗರದ ಬಿಎಲ್ ಕಪೂರ್ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಸಾವಿನ ನಂತರ ಅವರನ್ನು ಕೋವಿಡ್-19 ಟೆಸ್ಟ್ಗೆ ಒಳಪಡಿಸಿದಾಗ ಕೊರೊನಾ ಸೋಂಕು ಅವರಲ್ಲಿ ದೃಢಪಟ್ಟಿತ್ತು.
ಪೂರ್ಣಿಮಾ ವಿದ್ಯಾರ್ಥಿ ಮೃತದೇಹವನ್ನು ಅವರು ವಾಸಿಸುತ್ತಿದ್ದ, ಆನಂದ್ ಪರ್ವತ್ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಕೋವಿಡ್ -19 ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನಡೆಸಿಲ್ಲ ಎನ್ನಲಾಗಿದೆ.
ದೆಹಲಿಯಲ್ಲಿ ಶನಿವಾರ ಒಂದೇ ದಿನದಲ್ಲಿ 3,630 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಇಷ್ಟು ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಕಂಡು ಬಂದಿದ್ದು, ಇದೇ ಮೊದಲಾಗಿದೆ. ಇದರಿಂದ ದೆಹಲಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 56 ಸಾವಿರ ದಾಟಿದೆ. ಸಾವಿನ ಸಂಖ್ಯೆ 2,112 ಮುಟ್ಟಿದೆ.
ಶನಿವಾರ ಎರಡನೇ ಬಾರಿಗೆ ಒಂದೇ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೂರು ಸಾವಿರದ ಗಡಿ ದಾಟಿದೆ. ಇದಕ್ಕೂ ಮೊದಲು ಜೂನ್ 19ರಂದು 3,137 ಮಂದಿ ಸೋಂಕಿತರು ಪತ್ತೆಯಾಗಿದ್ದರು.