ಕುಸಿದ ಆರ್ಥಿಕತೆಗಳು, ಸಂಕಷ್ಟಕ್ಕೆ ಸಿಲುಕಿರುವ ಕ್ಷೇತ್ರಗಳು, ಮೃತಪಟ್ಟ ಜನರು, ಕಳೆದುಹೋದ ಜೀವಗಳು, ಛಿದ್ರಗೊಂಡ ಜೀವನೋಪಾಯಗಳು. ಇವು ಇಂದು ವಿಶ್ವಾದ್ಯಂತ ಕೋವಿಡ್ ಮಹಾಮಾರಿ ವಕ್ಕರಿಸಿದ ಬಿಕ್ಕಟ್ಟಿನ ವಿನಾಶಕಾರಿ ಪರಿಣಾಮಗಳಾಗಿವೆ. 1930ರ ಮಹಾ ಆರ್ಥಿಕ ಕುಸಿತಕ್ಕೆ ಹೋಲುವ ದುರಂತ ಇದಾಗಲಿದೆ ಎಂದು ಏಪ್ರಿಲ್ ತಿಂಗಳಲ್ಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುನ್ಸೂಚನೆ ನೀಡಿತ್ತು. ಅದೇ ರೀತಿಯ ಪರಿಸ್ಥಿತಿಯನ್ನು ಈಗ ವಿಶ್ವದ ಹಲವು ದೇಶಗಳು ಅನುಭವಿಸುತ್ತಿವೆ.
ಜನಸಂಖ್ಯೆಯ ತಲಾ ಆದಾಯವು ಭಾರಿ ಪ್ರಮಾಣದಲ್ಲಿ ಕುಸಿಯುತ್ತದೆ ಮತ್ತು ಲಕ್ಷಾಂತರ ಜನರು ಬಡತನದ ರೇಖೆಯತ್ತ ಸಾಗುತ್ತಿದ್ದಾರೆ. 2021ರ ಅಂತ್ಯದ ವೇಳೆಗೆ ಭಾರಿ ನಷ್ಟ ಸಂಭವಿಸಲಿದೆ ಎಂದು ನಾಲ್ಕು ತಿಂಗಳ ಹಿಂದೆ ವಿಶ್ವಬ್ಯಾಂಕ್ ಅಂದಾಜು ಮಾಡಿತ್ತು. ಹೀಗಾಗಿ, ಬಡತನದಲ್ಲಿ ಒದ್ದಾಡುತ್ತಿರುವ 15 ಕೋಟಿ ಜನರಿಗೆ ವಿಶೇಷವಾಗಿ ಸಬ್- ಸಹರಾದ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ಕಾರ್ಯತಂತ್ರಗಳು ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಬದಲಾವಣೆ ತರಲು ವಿಶ್ವ ಬ್ಯಾಂಕ್ ಕರೆ ನೀಡಿದೆ. ವಾಸ್ತವವಾಗಿ ಉದ್ಯೋಗದ ದೃಷ್ಟಿಯಿಂದ ಭಾರತವು ಹೆಚ್ಚು ಕಠಿಣ ಪರಿಸ್ಥಿತಿಯನ್ನು ಎದುರಿಸಲಿದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಅಂದಾಜಿಸಿದೆ.
ಉದ್ಯೋಗ ನಷ್ಟದ ದೃಷ್ಟಿಯಿಂದ 40 ಕೋಟಿ ಕಾರ್ಮಿಕರು ದೇಶದಲ್ಲಿ ತೀವ್ರ ಬಡತನಕ್ಕೆ ಸಿಲುಕುತ್ತಾರೆ ಎಂದು ಅಂದಾಜು ಮಾಡಲಾಗಿದೆ. ರೇಟಿಂಗ್ ಏಜೆನ್ಸಿಗಳಾದ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಫಿಚ್ ಮತ್ತು ವಿಶ್ವಬ್ಯಾಂಕ್ ದೇಶೀಯ ಹಣಕಾಸು ಕ್ಷೇತ್ರವು ಶೇಕಡಾ 99.6 ರಷ್ಟು ಕುಸಿಯುತ್ತದೆ ಎಂದು ಹೇಳಿವೆ. ಕೊರೊನಾ ಸಾಂಕ್ರಾಮಿಕ ರೋಗವು ಈಗ ಆರ್ಥಿಕತೆಯನ್ನು ಬದಲಾಯಿಸಲಾಗದ ರೀತಿ ಹೊಡೆತ ಕೊಟ್ಟಿದೆ. ಹೀಗಾಗಿ, ಈಗಾಗಲೇ ಭಾರೀ ಪ್ರಮಾಣದ ಆರ್ಥಿಕ ಹಿಂಜರಿತ ಆರಂಭವಾಗಿದೆ. ಸ್ಥಿರವಾದ ಆದಾಯವಿಲ್ಲದ ಲಕ್ಷಾಂತರ ಕಾರ್ಮಿಕರು ಮತ್ತು ಅವರ ಅವಲಂಬಿತರು ಭವಿಷ್ಯದ ಜೀವನೋಪಾಯದ ಅಸ್ಪಷ್ಟ ಅನಿಶ್ಚಿತತೆಯತ್ತ ಸಾಗುತ್ತಿದ್ದಾರೆ. ನಿರಂತರ ಬಿಕ್ಕಟ್ಟಿನ ಸಂದರ್ಭದಲ್ಲಿ ಮತ್ತು ಯೋಜನೆಗಳು ಮತ್ತು ಕಾರ್ಯಕ್ರಮಗಳು ಜಾರಿಗೆ ಬರುವವರೆಗೆ ಮತ್ತು ಕೋವಿಡ್ ನಂತರ ಸಾಮಾನ್ಯ ಸ್ಥಿತಿಯನ್ನು ಪುನಃ ಸ್ಥಾಪಿಸುವವರೆಗೆ ಲಕ್ಷಾಂತರ ಬಡವರ ಹಸಿವು ನೀಗಿಸುವುದು ಹೇಗೆ? ಎಂಬ ಚಿಂತೆಯಲ್ಲಿದ್ದಾರೆ.