ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಬಗ್ಗೆ ಇದೀಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಐದು ಸ್ತಂಭದ ಆಧಾರದ ಮೇಲೆ ಭಾರತದ ಅಭಿವೃದ್ಧಿ ಮಾಡುವುದಾಗಿ ಹೇಳಿದ್ದು, ಪ್ರಧಾನಿ ಹೇಳಿದಂತೆ ದೇಶ ಕಟ್ಟಲು ಅನೇಕ ಸುಧಾರಣಾ ಕ್ರಮ ಘೋಷಣೆ ಮಾಡಲಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯ ವಿಶೇಷತೆಗಳು
ಆರ್ಥಿಕ ಅಭಿವೃದ್ಧಿ, ಸ್ವದೇಶಿ ವಸ್ತು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಈ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಅದಕ್ಕಾಗಿ ಆತ್ಮನಿರ್ಭರ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಆತ್ಮ ನಿರ್ಭರ ಎಂದರೆ ಸ್ವಾವಲಂಬಿ ಎಂದು ಹೇಳಿದರು. ಭೂಮಿ, ಕಾರ್ಮಿಕರು, ದೇಶದ ಅಭಿವೃದ್ಧಿ ಹಾಗೂ ಸ್ವಾವಲಂಬಿ ಭಾರತಕ್ಕಾಗಿ ಪ್ಯಾಕೇಜ್ ಸಹಕಾರಿಯಾಗಲಿದ್ದು, ಹಲವು ಕ್ಷೇತ್ರದ ತಜ್ಞರೊಂದಿಗೆ ಚರ್ಚೆ ನಡೆಸಿದ ಬಳಿಕ ಪ್ಯಾಕೇಜ್ ದೇಶದ ಜನರ ಮುಂದೆ ಇಟ್ಟಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ಲೋಕಲ್ ಬ್ರಾಂಡ್ ನಿರ್ಮಿಸುವುದು ನಮ್ಮ ಮುಖ್ಯ ಉದ್ದೇಶವಾಗಿದ್ದು, 5 ಸ್ತಂಭದ ಆಧಾರದ ಮೇಲೆ ಸ್ವಾವಲಂಬಿ ಭಾರತ ನಿರ್ಮಾಣ ಮಾಡುವುದು ನಮ್ಮ ಗುರಿ ಎಂದು ಪ್ರಕಟಿಸಿದರು. ಪ್ರಧಾನಿ ಹೇಳಿದಂತೆ ದೇಶ ಕಟ್ಟಲು ಅನೇಕ ಸುಧಾರಣಾ ಕ್ರಮ. ಈಗಾಗಲೇ ನಾವು ಪಿಪಿಇ ಕಿಟ್‌ಗಳು ಮತ್ತು ವೆಂಟಿಲೇಟರ್‌ಗಳ ಸಂಖ್ಯೆಯನ್ನ ಹೆಚ್ಚಿಸಿಕೊಂಡಿದ್ದೇವೆ. ಭಾರತ ತನ್ನ ಸ್ವಂತ ಶಕ್ತಿಯನ್ನ ಹೊಂದಿದೆ, ವಿಶ್ವಕ್ಕೆ ತನ್ನದೇ ಕೊಡುಗೆಯನ್ನ ನೀಡಲಿದೆ. ಮೂಲಸೌಕರ್ಯ ಮತ್ತು ತಂತ್ರಜ್ಞಾನ ಆಧಾರಿತ ವ್ಯವಸ್ಥೆ. ಜನಸಂಖ್ಯೆ, ಬೇಡಿಕೆ ಮತ್ತು ಆರ್ಥಿಕ ಸ್ವಾವಲಂಬಿತ ಭಾರತ ನಿರ್ಮಾಣ ಮಾಡಲು ಮುಂದಾಗಿದ್ದು, ಭಾರತ ಎಲ್ಲ ವಲಯಗಳಲ್ಲಿ ಈಗಲೂ ಸಮರ್ಥವಾಗಿದೆ ಎಂದರು.
ದೇಶದಲ್ಲಿ ಈಗಾಗಲೇ ಕೃಷಿ ವಲಯದಲ್ಲಿ ಕಿಸಾನ್ ಸಮ್ಮಾನ್ ಯೋಜನೆ, ಜನ್‌ಧನ್, ಆಧಾರ್ ಯೋಜನೆಯಿಂದ ನಗದು ವರ್ಗಾವಣೆಯಾಗುತ್ತಿದೆ. ಉಜ್ವಲ್ ಯೋಜನೆ ಮೂಲಕ 3 ತಿಂಗಳು ಉಚಿತ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ ಎಂದರು.
ಜನ್‌ಧನ್, ಆಧಾರ್, ಮೊಬೈಲ್ ತಂತ್ರಜ್ಞಾನದ ಮೂಲಕ ನಗದು ವರ್ಗಾವಣೆಯಾಗಿದೆ. 52 ಸಾವಿರ ಕೋಟಿ ರೂ. ಹಣ ಜನ್‌ಧನ್ ಖಾತೆಗೆ ವರ್ಗಾವಣೆ ಮಾಡಿದ್ದೇವೆ. 44 ಕೋಟಿ ಜನ್‌ಧನ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಕೃಷಿ ವಿಮೆ, ಪಿಎಂ ಫಸಲ್ ಭೀಮಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಲಾಗಿದ್ದು, ಬ್ಯಾಂಕಿಂಗ್ ವಲಯವನ್ನ ಸ್ವಚ್ಛಗೊಳಿಸಲು ಕೇಂದ್ರ ಸರ್ಕಾರ ಕೆಲಸ ಮಾಡ್ತಿದೆ ಎಂದು ಸೀತಾರಾಮನ್ ತಿಳಿಸಿದರು.