ನೋಯ್ಡಾ(ಉತ್ತರ ಪ್ರದೇಶ): ಇಲ್ಲಿನ ಸೆಕ್ಟರ್ 38ರಲ್ಲಿ ಒಂದು ವಿಶೇಷ ರೆಸ್ಟೋರೆಂಟ್ ಇದೆ. ಈ ರೆಸ್ಟೋರೆಂಟ್ ನಿಮಗೆ ಸಾಹಸಮಯ ಅನುಭವವನ್ನು ಉಣಬಡಿಸುತ್ತದೆ.
ಇದು 'ಫ್ಲೈ ಡೈನಿಂಗ್ ರೆಸ್ಟೋರೆಂಟ್'. ಭೂಮಿಯಿಂದ ಸುಮಾರು 160 ಅಡಿ ಎತ್ತರದಲ್ಲಿ ಕುಳಿತು ರುಚಿರುಚಿಯಾದ ಆಹಾರ ಸವಿಯುವ ಅವಕಾಶ ಇಲ್ಲಿ ಸಿಗುತ್ತದೆ.
24 ಸೀಟುಗಳುಳ್ಳ ದೊಡ್ಡ ಟೇಬಲ್ನಲ್ಲಿ ಕುಳಿತುಕೊಂಡರೆ ಸಾಕು. ಕ್ರೇನ್ ಮೂಲಕ 'ಈ ಫ್ಲೈ ಡೈನಿಂಗ್ ರೆಸ್ಟೋರೆಂಟ್'ಅನ್ನು ಮೇಲಕ್ಕೆತ್ತಲಾಗುತ್ತದೆ. ರೆಸ್ಟೋರೆಂಟ್ನ ಸಪ್ಲೈಯರ್ ಹಾಗೂ ಇತರ ಸಿಬ್ಬಂದಿಗೆ ಸಂಚರಿಸಲು ಇದರೊಳಗೆ ಕಡಿಮೆ ಸ್ಥಳಾವಕಾಶವಿದೆ.
ನಿಖಿಲ್ ಕುಮಾರ್ ಎಂಬವರು ದುಬೈನಲ್ಲಿ ಕಂಡ ಇಂತಹ ಒಂದು ಯೋಜನೆಯಿಂದ ಪ್ರೇರಿತರಾಗಿ ಈ ರೆಸ್ಟೋರೆಂಟ್ ನಿರ್ಮಿಸಿದ್ದಾರೆ. ಅಲ್ಲದೆ ಸುರಕ್ಷತಾ ದೃಷ್ಟಿಯಿಂದ ಗರ್ಭಿಣಿಯರು ಹಾಗೂ ಸಣ್ಣ ಮಕ್ಕಳಿಗೆ ಈ ರೆಸ್ಟೋರೆಂಟ್ಗೆ ಹೋಗಲು ಅವಕಾಶ ನೀಡೋದಿಲ್ಲ.
ಈ ರೆಸ್ಟೋರೆಂಟ್ ಸಂಜೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ತೆರೆಯಲಾಗುತ್ತದೆ. ಗಾಳಿಯಲ್ಲಿ ಆಹಾರ ಸೇವಿಸಲು ಇಚ್ಛಿಸುವವರು ಸುಮಾರು 40 ನಿಮಿಷಗಳವರೆಗೆ ಈ ರೆಸ್ಟೋರೆಂಟ್ನಲ್ಲಿ ಎಂಜಾಯ್ ಮಾಡಬಹುದು.