ಗುವಾಹಟಿ:ಅಸ್ಸೋಂನಲ್ಲಿ ಸಂಭವಿಸಿರುವ ಪ್ರವಾಹಕ್ಕೆ 7 ಮಂದಿ ಬಲಿಯಾಗಿದ್ದಾರೆ. ಭಾರಿ ಮಳೆಯಿಂದಾಗಿ 15 ಲಕ್ಷಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ.
ರಾಜ್ಯ ಸರ್ಕಾರ ಕೊರೊನಾ ಜತೆ ಜತೆಗೆ ಪ್ರವಾಹವನ್ನೂ ನಿಯಂತ್ರಣ ಮಾಡಬೇಕಾದ ಅನಿವಾರ್ಯತೆಯಲ್ಲಿದೆ. ಇದುವರೆಗೂ ರಾಜ್ಯದಲ್ಲಿ 24 ಭೂ ಕುಸಿತ ಪ್ರಕರಣಗಳು ವರದಿಯಾಗಿವೆ. ಈ ಪರಿಣಾಮ 3 ಮಂದಿ ಅಸುನೀಗಿದ್ದಾರೆ. 2,197 ಹಳ್ಳಿಗಳು ನೀರಿನಲ್ಲಿ ಮುಳಗಿ ಹೋಗಿವೆ. 87,018.17 ಹೆಕ್ಟೇರ್ ಭೂಮಿಯಲ್ಲಿನ ಬೆಳೆ ನೀರು ಪಾಲಾಗಿದೆ ಎಂದು ಅಸ್ಸೋಂ ಸರ್ಕಾರ ಹೇಳಿದೆ.
ಭಾರಿ ಪ್ರವಾಹದಿಂದಾಗಿ ಇಲ್ಲಿನ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನ ಜೀವನಕ್ಕಷ್ಟೇ ಅಲ್ಲದೆ ಪ್ರಾಣಿಗಳ ಜೀವನಕ್ಕೂ ಕುತ್ತು ತಂದಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಶೇ.60 ರಷ್ಟು ಪ್ರದೇಶ ಪ್ರವಾಹದ ಭೀಕರತೆಗೆ ಸಾಕ್ಷಿಯಾಗಿದೆ. ಪೊಬಿಟೋರಾ ವನ್ಯಜೀವಿ ಅಭಯಾರಣ್ಯದಲ್ಲಿ ಖಡ್ಗಮೃಗಗಳ ಕಳೇಬರ ಪತ್ತೆಯಾಗಿದೆ. ಪ್ರವಾಹದಿಂದಾಗಿ ಪ್ರಾಣಿಗಳ ಜೀವಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಂಭಾವ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಜೋರ್ಹತ್, ತೇಜ್ಪುರ್, ಗುವಾಹಟಿ, ಗೋಲ್ಪಾರ ಮತ್ತು ಧುಬ್ರಿ ಜಿಲ್ಲೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಅಸ್ಸೋಂ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊರಡಿಸಿದ ಪ್ರವಾಹ ವರದಿಯಲ್ಲಿಈ ವಿಷಯಗಳನ್ನ ತಿಳಿಸಲಾಗಿದೆ.
ರಣಭೀಕರ ಪ್ರವಾಹಕ್ಕೆ ನಲುಗಿದ ರಾಜ್ಯ