ಶ್ರೀನಗರ: ಅಚ್ಚರಿ ಎಂಬಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇದೇ ಮೊದಲ ಬಾರಿಗೆ ಶ್ರೀನಗರದಲ್ಲಿ ತೇಲುವ ಆ್ಯಂಬುಲೆನ್ಸ್ನ ಸೇವೆ ಪ್ರಾರಂಭವಾಗಲಿದೆ. ಈ ತೇಲುವ ಆ್ಯಂಬುಲೆನ್ಸ್ನ ಸೇವೆ ಶ್ರೀನಗರದ ದಾಲ್ ಸರೋವರದಲ್ಲಿದ್ದು, ಪ್ರವಾಸಿಗರೂ ಸಹ ಈ ಸೌಲಭ್ಯ ಪಡೆಯಬಹುದು.
ಆರೋಗ್ಯ ಸಮಸ್ಯೆ ಎದುರಾದಾಗಲೆಲ್ಲ ದಾಲ್ ಸರೋವರದ ಜನರು ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆರೋಗ್ಯದಲ್ಲಿ ಸಣ್ಣ ಪ್ರಮಾಣದಲ್ಲಿ ಏರುಪೇರಾದಾಗಲೂ ತಕ್ಷಣ ಆಸ್ಪತ್ರೆಗೆ ತೆರಳಬೇಕೆಂದರೆ ಇಲ್ಲಿನ ಜನರಿಗೆ ಅದು ಕಷ್ಟದ ಸಂಗತಿ. ಯಾವುದಾದರೊಂದು ದೋಣಿ ಬಂದು ಹೋಗುವವರೆಗೂ ರೋಗಿ ನೋವಿನಲ್ಲೇ ಕಾಲ ಕಳೆಯಬೇಕಾದಂತಹ ಪರಿಸ್ಥಿತಿ ಈಗಲೂ ಇಲ್ಲಿದೆ.
ಓದಿ:ಪುತ್ತೂರಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್ ಮೂಲಕ ರೋಗಿ ರವಾನೆ: ಆ್ಯಂಬುಲೆನ್ಸ್ ಚಾಲಕನ ಕಾರ್ಯಕ್ಕೆ ಮೆಚ್ಚುಗೆ
ದೋಣಿಗಳು ಅಗತ್ಯವಿದ್ದಾಗ ಮಾತ್ರ (ರಾತ್ರಿ ವೇಳೆ ಹೊರತುಪಡಿಸಿ) ರೋಗಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ಸಾಮರ್ಥ್ಯ ಹೊಂದಿವೆ. ಹಾಗಾಗಿ ದಾಲ್ ಸರೋವರದ ಜನರು ಹಾಗೂ ಪ್ರವಾಸಿಗರು ಆರೋಗ್ಯದಲ್ಲಿ ಸಮಸ್ಯೆಯಾದಾಗಲೆಲ್ಲ ಭಾರಿ ತೊಂದರೆ ಅನುಭವಿಸುತ್ತಿದ್ದಾರೆ.
ಇವರ ತೊಳಲಾಟ ಕಂಡುಕೊಂಡ ತಾರಿಕ್ ಅಹ್ಮದ್ ಪಟ್ಲೂ ಎಂಬ ಸಾಮಾಜಿಕ ಕಾರ್ಯಕರ್ತ "ಬೋಟ್ ಆ್ಯಂಬುಲೆನ್ಸ್" (ತೇಲುವ ಆ್ಯಂಬುಲೆನ್ಸ್) ಸೇವೆ ಒದಗಿಸಿಕೊಡುವ ಮೂಲಕ ಕಣಿವೆ ಜನರ ಸಮಸ್ಯೆ ದೂರ ಮಾಡಲು ಮುಂದಾಗಿದ್ದಾರೆ. ಕೆಲವೇ ದಿನಗಳಲ್ಲಿ ಈ ದೋಣಿ ತನ್ನ ಸೇವೆ ಪ್ರಾರಂಭಿಸಲಿದೆ.
ಈಟಿವಿ ಭಾರತದ ಜೊತೆ ಮಾತನಾಡಿದ ಪಟ್ಲೂ, ಕಣಿವೆ ಜನರು ಕಳೆದ ಹಲವು ವರ್ಷಗಳಿಂದ ಇಂತಹ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಇದಕ್ಕೆ ಯಾವುದೇ ಪರಿಹಾರವಿಲ್ಲ ಎಂದು ಹೇಳಿ ಎಲ್ಲರೂ ಕೈಚೆಲ್ಲಿ ಕುಳಿತಿದ್ದರು. ಕೋವಿಡ್ ಸಮಯದಲ್ಲಿ ನಾನು ಅದರ ಬಗ್ಗೆ ಸಾಕಷ್ಟು ಯೋಚಿಸಿದ್ದೆ. ನನಗೆ ಸೋಂಕು ತಗುಲಿದ್ದರಿಂದ ಇಲ್ಲಿರುವ ಎಲ್ಲರೂ ನನ್ನ ಹತ್ತಿರ ಬರಲು ಹೆದರುತ್ತಿದ್ದರು ಎಂದರು.
ಓದಿ:ಯುವತಿಗೆ ಶ್ವಾಸಕೋಶದ ಸಮಸ್ಯೆ: ಪುತ್ತೂರಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್‌ನಲ್ಲಿ ರವಾನೆ
ಆಸ್ಪತ್ರೆಗೆ ಹೋಗುವುದು ಸಹ ಸಮಸ್ಯೆಯಾಗಿತ್ತು. ದೋಣಿ ಮಾಲೀಕರು ಸಹ ಕೋವಿಡ್ ಇದ್ದ ಜನರನ್ನು ಕರೆದೊಯ್ಯಲು ಹಿಂದು ಮುಂದು ನೋಡುತ್ತಿದ್ದರು. ಕೆಲವರು ಭಾರಿ ಹಣದ ಬೇಡಿಕೆ ಇಡುತ್ತಿದ್ದರು. ಇದೇ ವೇಳೆ ಏಕೆ ಇಂತಹ ಆ್ಯಂಬುಲೆನ್ಸ್ ತರಬಾರದು ಎಂದೆನಿಸಿತು. ಆಗ ಹೊಳೆದಿದ್ದೇ ಈ ತೇಲುವ ಆ್ಯಂಬುಲೆನ್ಸ್ ಯೋಚನೆ. ಈಗ ಅದು ಸಾಕಾರಗೊಳ್ಳುವ ಹಂತಕ್ಕೆ ಬಂದು ನಿಂತಿದೆ ಎಂದರು.
ಇದು ಇನ್ನೂ ಸಂಪೂರ್ಣವಾಗಿ ಸಿದ್ಧಗೊಂಡಿಲ್ಲ. ಆ್ಯಂಬುಲೆನ್ಸ್ಗೆ ತಕ್ಕಂತೆ ಮೋಟಾರ್ ಅನ್ನು ಸರಿಪಡಿಸಲಾಗುತ್ತದೆ. ಬಳಿಕವೇ ದೋಣಿ ಜನರ ಸೇವೆಗೆ ಇಳಿಯಲಿದೆ. ನಾವು ಕೆಲವು ವೈದ್ಯರೊಂದಿಗೆ ಆ್ಯಂಬುಲೆನ್ಸ್ಗಾಗಿ ಮಾತುಕತೆ ನಡೆಸುತ್ತಿದ್ದೇವೆ. ನನ್ನ ಹಣದ ಜೊತೆಗೆ ದೆಹಲಿ ಮೂಲದ 'ಸತ್ಯ ರೇಖಾ' ಎಂಬ ಎನ್‌ಜಿಒ ಕಂಪನಿ ಸಹ ಆ್ಯಂಬುಲೆನ್ಸ್ ಸೇವೆಗಾಗಿ ಹಣ ಹೂಡಿದೆ. ಕಾರಣಾಂತರಗಳಿಂದ ಸರಿಯಾದ ಸಮಯಕ್ಕೆ ಸೇವೆ ನೀಡಲಾಗಿರಲಿಲ್ಲ. ಸರ್ಕಾರದ ಬೆಂಬಲ ಹಾಗೂ ವೈದ್ಯರ ದೈನಂದಿನ ಸೇವೆ ಅಗತ್ಯವಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ತಾರಿಕ್ ಅಹ್ಮದ್ ಪಟ್ಲೂ.