ರಿಷಿಕೇಶ್ ( ಉತ್ತರಾಖಂಡ ) : ಕೋವಿಡ್ ಪಾಸಿಟಿವ್ ಬಂದಿದ್ದ ಉತ್ತರಾಖಂಡ ಪ್ರವಾಸೋದ್ಯಮ ಸಚಿವ ಮತ್ತು ಅಧ್ಯಾತ್ಮಿಕ ನಾಯಕ ಸತ್ಪಾಲ್ ಮಹಾರಾಜ್ ಅವರ ಐವರು ಕುಟುಂಬ ಸದಸ್ಯರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಸಚಿವರ ಇಬ್ಬರು ಗಂಡು ಮಕ್ಕಳು, ಅವರ ಹೆಂಡತಿಯರು ಮತ್ತು ಮೊಮ್ಮಗನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಏಮ್ಸ್ ಆಸ್ಪತ್ರೆಯ ಆಡಳಿತ ವಿಭಾಗದ ಡೀನ್ ಡಾ.ಯುಬಿ ಮಿಶ್ರಾ ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾದವರ ಪೈಕಿ ಸಚಿವರ ಮಗ ಮತ್ತು ಮೊಮ್ಮಗನಿಗೆ ನೆಗೆಟಿವ್ ಬಂದಿದೆ. ಇನ್ನೋರ್ವ ಮಗ ಮತ್ತು ಇಬ್ಬರು ಸೊಸೆಯಂದಿರಿಗೆ ಪಾಸಿಟಿವ್ ಇದ್ದು, ಸೋಂಕಿನ ಲಕ್ಷಣಗಳು ಇಲ್ಲದ ಕಾರಣ ಅವರನ್ನು ಸದ್ಯ ಹೋಂ ಕ್ವಾರಂಟೈನ್ ಮಾಡಲಾಗಿದೆ. ವೈದ್ಯರ ತಂಡದಿಂದ ಈ ಮೂವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.
ಈ ಮಧ್ಯೆ ಸಚಿವ ಮಹಾರಾಜ್ ಮತ್ತು ಅವರ ಪತ್ನಿ ಮಾಜಿ ರಾಜ್ಯ ಸಚಿವೆ ಅಮೃತ ರಾವತ್ ಇಬ್ಬರಿಗೂ ಕೋವಿಡ್ ಪಾಸಿಟಿವ್ ಬಂದಿದ್ದು ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವ ಮಹಾರಾಜ್ಗೆ ಪಾಸಿಟಿವ್ ಬಂದ ಬಳಿಕ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಮತ್ತು ರಾಜ್ಯ ಕ್ಯಾಬಿನೆಟ್ನ ಎಲ್ಲ ಸದಸ್ಯರು ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕ್ವಾರಂಟೈನ್ಗೆ ಒಳಗಾಗಿದ್ದಾರೆ.