ಆಗ್ರಾ:ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ ಕಾರೊಂದು ಬೆಂಕಿಗಾಹುತಿಯಾಗಿ ಐವರು ಸಜೀವ ದಹನಗೊಂಡಿರುವ ಘಟನೆ ಇಲ್ಲಿನ ಯುಮನಾ ಎಕ್ಸ್ಪ್ರೆಸ್ ಹೈವೇಯಲ್ಲಿ ಸಂಭವಿಸಿದೆ.
ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ... ಯಮುನಾ ಎಕ್ಸ್ಪ್ರೆಸ್ ಹೈವೇಯಲ್ಲಿ ಐವರು ಸಜೀವ ದಹನ! - ಆಗ್ರಾ ರಸ್ತೆ ಅಪಘಾತ,
07:36 December 22
ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಕಾರೊಂದು ಕಂಟೈನರ್ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.
ಉತ್ತರಪ್ರದೇಶದಿಂದ ದೆಹಲಿಯ ಕಡೆ ಪ್ರಯಾಣಿಸುತ್ತಿದ್ದ ಕಾರೊಂದು ತಪ್ಪು ದಿಕ್ಕಿನಲ್ಲಿ ಬರುತ್ತಿದ್ದ ನಾಗಾಲ್ಯಾಂಡ್ ನೋಂದಣಿ ಸಂಖ್ಯೆಯುಳ್ಳ ಕಂಟೈನರ್ಗೆ ಡಿಕ್ಕಿ ಹೊಡಿದಿದೆ. ಡಿಕ್ಕಿ ರಭಸಕ್ಕೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ಸಮೇತ ಐವರು ಕಾರಿನಲ್ಲಿ ಸಿಲುಕಿಕೊಂಡಿದ್ದಾರೆ.
ಕಾರಿನಿಂದ ಹೊರ ಬರಲಾರದೇ ಸಿಲುಕಿಕೊಂಡ ಐವರು ರಕ್ಷಣೆಗಾಗಿ ಸ್ಥಳೀಯರಿಗೆ ಅಂಗಲಾಚಿದ್ದಾರೆ. ಆದ್ರೆ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಅಲ್ಲಿದ್ದವರು ರಕ್ಷಣೆಗೆ ಮುಂದಾಗಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಐವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.
ಕಾರಿಗೆ ಬೆಂಕಿ ಹೊತ್ತಿಕೊಂಡ ಗಂಟೆಯ ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಂಕಿಯನ್ನು ಅಗ್ನಿಶಾಮಕ ದಳ ನಂದಿಸಿತು. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.