ಶ್ರೀನಗರ:1948ರ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜುಲೈ 13 ರ ಹುತಾತ್ಮರ ದಿನದಂದು ಇರುತ್ತಿದ್ದ ಸರ್ಕಾರಿ ರಜೆ ಅಥವಾ ಸರ್ಕಾರಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರ ಆಡಳಿತವು 2020ರ ಅಧಿಕೃತ ರಜಾದಿನಗಳ ಪಟ್ಟಿಯಿಂದ ಹುತಾತ್ಮರ ದಿನ ಮತ್ತು ಶೇಖ್ ಅಬ್ದುಲ್ಲಾ ಅವರ ಜನ್ಮ ದಿನವನ್ನು ತೆಗೆದು ಹಾಕಿದ್ದರಿಂದ ಈ ಬೆಳವಣಿಗೆ ಕಂಡು ಬಂದಿದೆ.
370ನೇ ವಿಧಿ ರದ್ದತಿಯ ಬಳಿಕ 2019ರ ಡಿಸೆಂಬರ್‌ನಲ್ಲಿ ಜು.13ರ ಹುತಾತ್ಮರ ದಿನ ಹಾಗೂ ಡಿ.5 ರಂದು ಆಚರಿಸಲಾಗುತ್ತಿದ್ದ ಜಮ್ಮು-ಕಾಶ್ಮೀರದ ಮಾಜಿ ಪ್ರಧಾನಿ (1947) ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರ ಜನ್ಮ ದಿನವನ್ನು ಅಧಿಕೃತ ರಜಾ ದಿನಗಳ ಪಟ್ಟಿಯಿಂದ ಕೈಬಿಡಲಾಯಿತು. ಹೀಗಾಗಿ ಇಂದು ಹುತಾತ್ಮರ ದಿನದ ನಿಮಿತ್ತ ಇಂದು ಯಾವುದೇ ಸರ್ಕಾರಿ ಆಚರಣೆಗಳು ನಡೆಯುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.