ನವದೆಹಲಿ:ಭಾರತೀಯ ರೈಲ್ವೆ 167 ವರ್ಷಗಳನ್ನು ಪೂರೈಸಿದೆ. ಆದರೆ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರದಾದ್ಯಂತ ರೈಲ್ವೆ ಹಳಿಗಳು ಖಾಲಿಯಾಗಿವೆ.
ಕೊರೊನಾ ಲಾಕ್ ಡೌನ್ ಹಿನ್ನೆಲೆ ರೋಗ ಹರಡದಂತೆ, ರೈಲುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಭಯೋತ್ಪದಕರ ದಾಳಿ, ಬಾಂಬ್ ಸ್ಪೋಟ ಇದ್ಯಾವುದಕ್ಕೂ ನಿಲ್ಲದ ಭಾರತೀಯ ರೈಲ್ವೇ ಇದೀಗ ಕೋವಿಡ್-19ನಿಂದಾಗಿ ಸೇವೆಯನ್ನು ಸ್ಥಗಿತಗೊಳಿಸಿದೆ.
2006ರಲ್ಲಿ ಮುಂಬೈ ರೈಲು ಬಾಂಬ್ ಸ್ಫೋಟದ ಬಳಿಕ, ಕೆಲವೇ ಗಂಟೆಗಳಲ್ಲಿ ಸೇವೆಗಳನ್ನು ಪುನರಾರಂಭಿಸಲಾಗಿತ್ತು.
"ಇಂದಿನಿಂದ 167 ವರ್ಷಗಳ ಹಿಂದೆ, ರೈಲಿನ ಚಕ್ರಗಳು ಎಂದಿಗೂ ನಿಲ್ಲಬಾರದು ಎಂಬ ಉದ್ದೆಶ ಹಾಗೂ ಉತ್ಸಾಹದೊಂದಿಗೆ ಮುಂಬಯಿಯಿಂದ ಥಾಣೆವರೆಗಿನ ಮೊದಲ ಪ್ರಯಾಣಿಕರ ರೈಲಿನಿಂದ ಭಾರತದಲ್ಲಿ ರೈಲ್ವೆ ಸೇವೆ ಆರಂಭವಾಗಿತ್ತು. ಇದೀಗ ನಿಮ್ಮ ಸುರಕ್ಷತೆಗಾಗಿ ಮೊದಲ ಬಾರಿಗೆ ಪ್ರಯಾಣಿಕರ ರೈಲ್ವೆ ಸೇವೆಗಳನ್ನು ನಿಲ್ಲಿಸಲಾಗಿದೆ" ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದೆ.
ಭಾರತದ ಮೊದಲ ಪ್ರಯಾಣಿಕ ರೈಲು 1853 ಏಪ್ರಿಲ್ 16ರಂದು ಮುಂಬೈನಿಂದ (ಬೋರಿ ಬಂಡರ್) ಠಾಣೆಗೆ 400 ಪ್ರಯಾಣಿಕರನ್ನು ಕರೆದೊಯ್ದಿತ್ತು.
ಭಾರತೀಯ ರೈಲ್ವೆಗೆ 167 ವರ್ಷ ತುಂಬಿದ ಹಿನ್ನೆಲೆ ಟ್ವೀಟ್ ಮಾಡಿರುವ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, "1853 ರಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವ ಭಾರತೀಯ ರೈಲ್ವೆ, ಮುಂಬಯಿಯಿಂದ ಠಾಣೆಗೆ ಪ್ರಯಾಣಿಕರನ್ನು ಕರೆದೊಯ್ಯುವ ಮುಲಕ ತನ್ನ ಸೇವೆಯನ್ನು ಆರಂಭಿಸಿತ್ತು. ತನ್ನ ಸುದೀರ್ಘ ಮತ್ತು ಅದ್ಭುತವಾದ ಸೇವೆಯ ನಂತರ, ಇದೀಗ ಮೊದಲ ಬಾರಿಗೆ ರೈಲ್ವೆ ಕಾರ್ಯಾಚರಣೆಗೆ ವಿರಾಮ ನೀಡಲಾಗಿದೆ. ಕೊವಿಡ್-19 ವಿರುದ್ಧ ನಾವು ವಿಜಯಿಶಾಲಿಗಳಾಗಿ ಹೊರ ಹೊಮ್ಮುತ್ತೇವೆ" ಎಂದು ತಿಳಿಸಿದ್ದಾರೆ.