ಲಕ್ನೋ:ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿಗೆ ಪ್ರಾಯೋಗಿಕವಾಗಿ ಪ್ಲಾಸ್ಮಾ ಥರಪಿ ಚಿಕಿತ್ಸೆ ಪಡೆದ ಮೊದಲ ರೋಗಿಯು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
58 ವರ್ಷದ ವೈದ್ಯ ರೋಗಿಯನ್ನು ಇಲ್ಲಿನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ (ಕೆಜಿಎಂಯು) ದಾಖಲಿಸಲಾಗಿತ್ತು. ಕಳೆದ 14 ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದ ವೈದ್ಯ, ಶನಿವಾರ ಸಂಜೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕೆಜಿಎಂಯು ಉಪಕುಲಪತಿ ಎಂ.ಎಲ್.ಬಿ.ಭಟ್ ತಿಳಿಸಿದ್ದಾರೆ.
ಅವರಿಗೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಇತ್ತು. ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ವೈದ್ಯರ ನಿರಂತರ ಪರಿಶೀಲನೆಯಲ್ಲಿಡಲಾಗಿತ್ತು. ರೋಗಿಯ ಆರೋಗ್ಯ ಸ್ಥಿರ ಸ್ಥಿತಿಯಲ್ಲಿತ್ತು. ಅವರ ಶ್ವಾಸಕೋಶ ಕೂಡಾ ಸುಧಾರಿಸಿತ್ತು. ಇಂದು ಅವರ ಕೋವಿಡ್ ಮಾದರಿಗಳ ಎರಡು ವರದಿಗಳು ನೆಗೆಟಿವ್ ಎಂದು ಬಂದಿದ್ದವು. ಆದಾಗ್ಯೂ ಅವರಿಗೆ ಸಂಜೆ 5ರ ಸುಮಾರಿಗೆ ಹೃದಯಾಘಾತ ಸಂಭವಿಸಿದೆ. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅವರನ್ನು ಉಳಿಸಲು ಸಾಧ್ಯವಾಗಿಲ್ಲ ಎಂದು ಭಟ್ ಹೇಳಿದರು.
ಉತ್ತರ ಪ್ರದೇಶದ ಒರೈನ ವೈದ್ಯರಿಗೆ ಏಪ್ರಿಲ್ 26ರಂದು ಸರ್ಕಾರಿ ಕೆಜಿಎಂಯುನಲ್ಲಿ ಪ್ಲಾಸ್ಮಾ ಥರಪಿ ಚಿಕಿತ್ಸೆ ನೀಡಲಾಗಿತ್ತು. ಕೆನಡಾದ ವೈದ್ಯರು ದಾನ ಮಾಡಿದ ಪ್ಲಾಸ್ಮಾವನ್ನು ಅವರಿಗೆ ನೀಡಲಾಗಿತ್ತು. ಅಲ್ಲದೆ ಅವರು ಆಸ್ಪತ್ರೆಯಲ್ಲಿ ದಾಖಲಾದ ಮೊದಲ ಕೋವಿಡ್ ರೋಗಿಯಾಗಿದ್ದರು. ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಂಡ್ಡಿದ್ದರು.
ರೋಗಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಿದಾಗ ಅವರ ಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಆದರೂ ಅವರ ಶ್ವಾಸಕೋಶ ಸುಧಾರಿಸಿತ್ತು. ಆದರೆ ಅವರು ಮಧುಮೇಹದಿಂದ ಬಳಲುತ್ತಿದ್ದ ವಯಸ್ಸಾದ ರೋಗಿಯಾಗಿದ್ದರಿಂದ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಈ ಚಿಕಿತ್ಸೆಯು ಕೋವಿಡ್ ರೋಗಿಗಳಿಗೆ ನೀಡುವ ಒಂದು ಪ್ರಾಯೋಗಿಕ ವಿಧಾನವಾಗಿದೆ. ಈ ಚಿಕಿತ್ಸೆಯಲ್ಲಿ ಗುಣಪಡಿಸಿದ ರೋಗಿಯಿಂದ ಪ್ಲಾಸ್ಮಾವನ್ನು ಚಿಂತಾಜನಕ ಸ್ಥಿತಿಯಲ್ಲಿರುವ ಕೊರೊನಾ ರೋಗಿಗೆ ವರ್ಗಾಯಿಸಲಾಗುತ್ತದೆ. ಕೋವಿಡ್ನಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತವು ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುತ್ತದೆ. ಆದರೆ, ಈ ಚಿಕಿತ್ಸೆಯನ್ನು ಕೊರೊನಾ ನಿಯಮಿತ ಚಿಕಿತ್ಸೆಯಾಗಿ ಪರಿಗಣಿಸುವುದರ ವಿರುದ್ಧ ಕೇಂದ್ರ ಆರೋಗ್ಯ ಸಚಿವಾಲಯ ಸಲಹೆ ನೀಡಿತ್ತು ಎಂದು ಪ್ಲಾಸ್ಮಾ ವರ್ಗಾವಣೆ ವಿಭಾಗದ ತುಲಿಕಾ ಚಂದ್ರ ಹೇಳಿದ್ದಾರೆ.