ತಿರುವನಂತಪುರಂ(ಕೇರಳ): ಜಗತ್ತೇ ಕೋವಿಡ್ ಸುಳಿಯಲ್ಲಿ ಸಿಕ್ಕಿ ನಲುಗುತ್ತಿದೆ. ಆರ್ಥಿಕತೆ ವೈರಸ್ ದಾಳಕ್ಕೆ ಸಿಲುಕಿ ಬಿದ್ದುಹೋಗಿದೆ. ಶೈಕ್ಷಣಿಕ ಕ್ಷೇತ್ರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸೈಲೆಂಟ್ ಆಗಿದೆ. ಕಣ್ಣಿಗೆ ಕಾಣದ ಮಾರಕ ವೈರಸ್ ವ್ಯೂಹಕ್ಕೆ ಸಿಲುಕಿ ಮಕ್ಕಳ ಬದುಕೇ ಅತಂತ್ರವಾಗಿದೆ...
ಕೇರಳ. ಶೈಕ್ಷಣಿಕೆವಾಗಿ ಭಾರೀ ಮುನ್ನಡೆಯಲ್ಲಿರುವ ಭಾರತದ ರಾಜ್ಯ. ದೇಶದಲ್ಲೇ ಅತಿ ಹೆಚ್ಚು ಸಾಕ್ಷರತೆ ಹೊಂದಿರುವುದು ಈ ರಾಜ್ಯದ ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ಹಿಡಿದ ಕೈಗನ್ನಡಿ. ಆರಂಭದಿಂದಲೇ ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ಹಾಗೂ ದಿಟ್ಟವಾಗಿ ನಿಭಾಯಿಸಿದ್ದಕ್ಕಾಗಿ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದ ರಾಜ್ಯವೆಂದರೆ ಅದು ಕೇರಳ. ವೈರಸ್ ರಾಜ್ಯಕ್ಕೆ ಪ್ರವೇಶ ಪಡೆಯುತ್ತಿದ್ದಂತೆಯೇ ಇಲ್ಲಿನ ರಾಜಕೀಯ ನಾಯಕರು, ಪ್ರಬುದ್ಧ ಜನತೆ ಎಚ್ಚೆತ್ತು ನಿಂತು ವೈರಸ್ ವಿರುದ್ಧ ಹೋರಾಟಕ್ಕೆ ನಿಂತ್ರು. ಅಗತ್ಯ ಸನ್ನಿವೇಶದಲ್ಲಿ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡು ಜನತೆಯ ರಕ್ಷಣೆಗೆ ತೊಡೆ ತಟ್ಟಿ ನಿಂತಿತು ಇಲ್ಲಿನ ಸರ್ಕಾರ. ವ್ಯಾಪಾರ-ವಹಿವಾಟು, ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲಾ ವಲಯಗಳನ್ನೂ ಗಣನೆಗೆ ತೆಗೆದುಕೊಂಡು ಪ್ರತಿಯೊಂದನ್ನೂ ಸೂಕ್ಷ್ಮವಾಗಿ ನಿಭಾಯಿಸಲಾಯ್ತು. ಈ ಸಂದರ್ಭದಲ್ಲಿ ದೇಶದೆಲ್ಲೆಡೆ ಚರ್ಚೆಗೊಳಗಾದ ಪ್ರಮುಖ ಕ್ಷೇತ್ರ ಶಿಕ್ಷಣ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಲಾ-ಕಾಲೇಜುಗಳನ್ನು ಮತ್ತೆ ತೆರೆಯುವ ಬಗ್ಗೆ ಪೋಷಕರು, ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರ ಚರ್ಚೆಗೆ ನಿಂತಿತು. ಆದ್ರೆ ಕೇರಳದ ವಿಷಯ ಹೀಗಿರಲಿಲ್ಲ.
ಶಾಲಾ- ಕಾಲೇಜುಗಳನ್ನು ಮತ್ತೆ ತೆರೆಯುವುದು ಬಿಡಿ. ಆ ಬಗ್ಗೆ ಯೋಚನೆಗೂ ಕೇರಳ ಸರ್ಕಾರ ಮುಂದಾಗಿಲ್ಲ. ಮಕ್ಕಳ ಆರೋಗ್ಯ ಹಾಗೂ ಪೋಷಕರ ಭಯಕ್ಕೆ ಧೈರ್ಯ ತುಂಬುವ ನಿರ್ಧಾರಕ್ಕೆ ಬಂದ ಕೇರಳ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ, ಮಕ್ಕಳ ಬಗ್ಗೆ ಅಪಾರ ಕಾಳಜಿ ವಹಿಸೋಕೆ ಸಂಕಲ್ಪ ಮಾಡಿತು. ಹಾಗಿದ್ರೆ ಮಕ್ಕಳ ಭವಿಷ್ಯದ ಕತೆ ಏನು? ಇದಕ್ಕಾಗಿ ಕಳೆದ ಜೂನ್ ಆರಂಭದಲ್ಲೇ ಪರಿಣಾಮಕಾರಿಯಾಗಿ ಆನ್‌ಲೈನ್ ತರಗತಿಗಳನ್ನು ವಿದ್ಯಾರ್ಥಿಗಳಿಗೆ ಆರಂಭಿಸೋಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೇರಳ ಸರ್ಕಾರ ಆರಂಭಿಸಿತು. ಅದುವೇ 'ಫಸ್ಟ್ ಬೆಲ್'.
ದೇಶದಲ್ಲೇ ಫಸ್ಟ್, ಕೇರಳದ 'ಫಸ್ಟ್ ಬೆಲ್'...
ಜೂನ್ 1 ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದಲ್ಲಿ ‘ಫಸ್ಟ್ ಬೆಲ್’ ಹೆಸರಿನ ಆನ್‌ಲೈನ್ ಶಿಕ್ಷಣ ವಿಧಾನವನ್ನು ಪ್ರಾರಂಭಿಸಿಬಿಟ್ಟರು. ಕೋವಿಡ್ನಿಂದಾಗಿ ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ ಹಾಜರಾಗಿ ಪಾಠ ಕಲಿಯುವ ಸ್ಥಿತಿಯಲ್ಲಿ ಇಲ್ಲದಿದ್ದಾಗ ಭಾರತದ ರಾಜ್ಯ ಸರ್ಕಾರವೊಂದು ಜಾರಿಗೆ ತಂದ ಆನ್‌ಲೈನ್ ಶಿಕ್ಷಣ ವ್ಯವಸ್ಥೆಯಲ್ಲಿ ಕೇರಳದ 'ಫಸ್ಟ್ ಬೆಲ್' ಮೊದಲನೆಯದು.
ಲಭ್ಯ ಅಂಕಿ-ಅಂಶಗಳ ಪ್ರಕಾರ, ಕೇರಳ ಸರ್ಕಾರ ನಡೆಸುತ್ತಿರುವ ಆನ್‌ಲೈನ್ ತರಗತಿಗಳಲ್ಲಿ ದೇಶಾದ್ಯಂತ ಸುಮಾರು 40 ಲಕ್ಷ ಜನರು ಭಾಗವಹಿಸುತ್ತಿದ್ದಾರೆ. ಪಾಠ ಕೇಳುತ್ತಿದ್ದಾರೆ.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಒಂದರಿಂದ 12 ನೇ ತರಗತಿವರೆಗಿನ ವಿದ್ಯಾರ್ಥಿಗಳು ತಮಗೆ ಅನುಕೂಲವಿರುವ ಮಾಧ್ಯಮಗಳ ಮೂಲಕ ತಮ್ಮ ಮನೆಯಲ್ಲೇ ಕುಳಿತು ಸುರಕ್ಷಿತವಾಗಿ ಪಾಠಗಳನ್ನು ಕಲಿಯಬಹುದು. ಟೆಲಿವಿಷನ್, ವೆಬ್ಸೈಟ್ ಹಾಗೂ ಯೂಟ್ಯೂಬ್ ಚಾನೆಲ್ ಮೂಲಕ ಪಾಠ ಕೇಳಲು ಸರ್ಕಾರ ವ್ಯವಸ್ಥೆ ಮಾಡಿದೆ.
ಎಲ್ಲಾ ತರಗತಿಗಳಿಗೆ ಬೆಳಿಗ್ಗೆ 8.30 ರಿಂದ ಸಂಜೆ 5.30 ರವರೆಗೆ ತರಗತಿಗಳನ್ನು ನಿಗದಿಪಡಿಸಲಾಗಿದೆ. ತರಗತಿಗಳನ್ನು ಕೇರಳದ ಸರ್ಕಾರಿ ಚಾನೆಲ್ 'ಕೈಟ್ ವಿಕ್ಟರ್ಸ್'ನಲ್ಲಿ ಪ್ರಸಾರ ಮಾಡಲಾಗುತ್ತದೆ. ಕೈಟ್ ವಿಕ್ಟರ್ಸ್‌ನ ವೆಬ್ಸೈಟ್ ಹಾಗೂ ಯೂಟ್ಯೂಬ್ ಚಾನೆಲ್‌ನಲ್ಲೂ ಇದು ಲಭ್ಯವಿದೆ.
ಎಲ್ಲಾ ರೀತಿಯಲ್ಲೂ ಅಚ್ಚುಕಟ್ಟು ವ್ಯವಸ್ಥೆ...
ತರಗತಿಗತಿಗಳಿಗೆ ಅನುಗುಣವಾಗಿ ಶಿಕ್ಷಕರು ನಡೆಸುವ ಪಾಠಗಳನ್ನು ಇಂಗ್ಲೀಷ್ ಹಾಗೂ ಮಲಯಾಳಂ ಮಾಧ್ಯಮಗಳ ಮೂಲಕ ರೆಕಾರ್ಡ್ ಮಾಡಲಾಗುತ್ತದೆ. ಇದಕ್ಕಾಗಿ ಎಲ್ಲಾ ರೀತಿಯ ಸುಸಜ್ಜಿತ ರೆಕಾರ್ಡಿಂಗ್ ಸೆಟ್ ನಿರ್ಮಿಸಿ ಶಿಕ್ಷಕರ ಪಾಠದ ವಿಡಿಯೋ ಚಿತ್ರೀಕರಣ ನಡೆಸಿ ಪ್ರಸಾರ ಮಾಡಲಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳನ್ನು ತಲುಪಲು ಬೇಕಾದ ವಿಸ್ತಾರವಾದ ಯೋಜನೆಯನ್ನು ರೂಪಿಸಲಾಗಿದೆ. ಪ್ರಾಯೋಗಿಕ ತರಗತಿಗಳ ನಂತರ ಬಂದ ಪ್ರತಿಕ್ರಿಯೆಗಳ ಅನುಸಾರವಾಗಿ ಕಾರ್ಯಕ್ರಮದಲ್ಲಿ ಅಗತ್ಯ ಬದಲಾವಣೆಯನ್ನೂ ಮಾಡಲಾಗಿದೆ.