ನವದೆಹಲಿ:ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಸಂಜೆಯಾಗುತ್ತಿದ್ದಂತೆ ಹಿಂಸಾಚಾರ ರೂಪ ತಾಳಿದ್ದು, ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ದೆಹಲಿಯ ಮೌಜ್ಪುರ್ದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು, ಈ ವೇಳೆ, ಪ್ರತಿಭಟನಾಕಾರರನ್ನು ಚದುರಿಸಲು ತೆರಳಿದ್ದ ಪೊಲೀಸ್ ಮುಖ್ಯ ಪೇದೆ ರತನ್ ಲಾಲ್ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಭಾರಿ ಬಂದೋಬಸ್ತ್ ಕೈಗೊಂಡಿದ್ದು, ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಸಿಎಎ ವಿರುದ್ಧ ಹಿಂಸಾಚಾರ:ಪೊಲೀಸ್ ಸೇರಿ ನಾಲ್ವರು ಸಾವು ಇನ್ನು ಸಂಜೆಯಾಗುತ್ತಿದ್ದಂತೆ ಪ್ರತಿಭಟನೆ ಹಿಂಸಾಚಾರ ತಾಳಿದ್ದು, ಮೂವರು ಸಾವನ್ನಪ್ಪಿದ್ದಾರೆ. ಪ್ರತಿಭಟನೆ ನಿಯಂತ್ರಣಕ್ಕೆ ತರಲು ತೆರಳಿದ್ದ 10ಕ್ಕೂ ಹೆಚ್ಚು ಪೊಲೀಸ್ ಪೇದೆಗಳು ಹಾಗೂ ಡಿಸಿಪಿ ಅಮಿತ್ ಶರ್ಮಾ ಈ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ. ಇನ್ನು ಪ್ರತಿಭಟನಾಕಾರರು ಗೋಕುಲ್ಪುರ್ ಪ್ರದೇಶದಲ್ಲಿ ಕಾರು, ಅಂಗಡಿಗಳು, ಪೆಟ್ರೋಲ್ ಪಂಪ್ಗಳಿಗೆ ಬೆಂಕಿ ಹಚ್ಚಿದ್ದಾಗಿ ತಿಳಿದು ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ ದೆಹಲಿ ಈಶಾನ್ಯ ಭಾಗದಲ್ಲಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ದೆಹಲಿಯ ಈಶಾನ್ಯ ಭಾಗದಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಘಟನೆ ಬಗ್ಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೂ ಕಲ್ಲು ತೂರಾಟ ಮಾಡಲಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಇದ್ಯಾವುದನ್ನ ಲಕ್ಷಿಸದೇ ಪ್ರತಿಭಟನಾಕಾರರು ಹಿಂಸಾಚಾರ ಮುಂದುವರೆಸಿದ್ದಾರೆ.