ನವದೆಹಲಿ: ಕಳೆದ ನವೆಂಬರ್ 29 ರಿಂದ ಕೇಂದ್ರ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದ್ದು, ಕೋವಿಡ್ -19 ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕೇಂದ್ರ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ 16ನೇ ದಿನಕ್ಕೆ ಕಾಲಿಟ್ಟಿದ್ದು, ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ರೈಲ್ವೆ ಹಳಿಗಳನ್ನು ನಿರ್ಬಂಧಿಸುವುದಾಗಿ ಗುರುವಾರ ಘೋಷಿಸಿದ್ದಾರೆ.
ಈ ಕುರಿತು ಸಭೆ ನಡೆಸಿದ ರೈತ ಸಂಘಗಳು, ದೇಶಾದ್ಯಂತ ರೈಲು ಹಳಿಗಳನ್ನು ನಿರ್ಬಂಧಿಸುವ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ನೂತನ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಸುಮಾರು ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘದ ಮುಖಂಡರು ಸಿಂಘು ಗಡಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ್ರು. ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಮತ್ತು ದೆಹಲಿಗೆ ತೆರಳಲು ಇರುವ ಎಲ್ಲಾ ಹೆದ್ದಾರಿಗಳನ್ನು ಬಂದ್ ಮಾಡುವುದಾಗಿ ಮತ್ತೆ ಎಚ್ಚರಿಸಿದ್ದಾರೆ. ಇದೇ ವೇಳೆ ರೈಲ್ವೆ ಹಳಿಗಳನ್ನು ನಿರ್ಬಂಧಿಸುವುದು ಹರಿಯಾಣ ಮತ್ತು ಪಂಜಾಬ್‌ಗೆ ಸೀಮಿತವಾಗಿಲ್ಲ, ಇದು ದೇಶಾದ್ಯಂತ ನಡೆಯಲಿದೆ ಎಂದು ರೈತ ಮುಖಂಡ ಬೂಟಾ ಸಿಂಗ್ ಹೇಳಿದದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪ್ರತಿಭಟನೆ ಕೈ ಬಿಡುವಂತೆ ರೈತ ಸಂಘದ ಮುಖಂಡರನ್ನು ಒತ್ತಾಯಿಸಿದ್ದಾರೆ ಮತ್ತು ಸರ್ಕಾರವು ರೈತ ಮುಖಂಡರೊಂದಿಗೆ ಯಾವುದೇ ಸಮಯದಲ್ಲಿ ಚರ್ಚೆಗೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.