ಲಖನೌ:ವಲಸೆ ಕಾರ್ಮಿಕರನ್ನು ಅವರ ಮನೆಗೆ ತಲುಪಿಸಲು ಕಾಂಗ್ರೆಸ್ ನೀಡಿರುವ ಬಸ್ಗಳ ಪಟ್ಟಿಯಲ್ಲಿ ಕಾರು, ಸ್ಕೂಟರ್ ಹಾಗೂ ಆಟೋಗಳ ನೋಂದಣಿ ಸಂಖ್ಯೆಗಳಿವೆ ಎಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಗಂಭೀರ ಆರೋಪ ಮಾಡಿದೆ.
ಉತ್ತರ ಪ್ರದೇಶ ಸರ್ಕಾರದ ಸಚಿವ ಹಾಗೂ ಸರ್ಕಾರದ ವಕ್ತಾರ ಸಿದ್ದಾರ್ಥ ನಾಥ್ ಸಿಂಗ್ ಮಾಧ್ಯಮಗಳೊಂದಿಗೆ ಮಾತನಾಡಿ, ಈ ರೀತಿ ಪಟ್ಟಿಯನ್ನು ನೀಡುವ ಮೂಲಕ ಕಾಂಗ್ರೆಸ್ ವಲಸೆ ಕಾರ್ಮಿಕರ ಹೆಸರಲ್ಲಿ ವಂಚನೆ ಎಸಗಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಮಕ್ಕಳಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿಯವರ ನಡೆಗೆ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಯಾವುದೇ ರಾಜಕೀಯ ಪಕ್ಷ ವಲಸೆ ಕಾರ್ಮಿಕರ ಹೆಸರಲ್ಲಿ ಈ ರೀತಿಯ ವಂಚನೆ ಎಸಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ತಾನು ಮಾಡಿದ ಘೋರ ಅಪರಾಧಕ್ಕಾಗಿ ದೇಶದ ಜನರ ಕ್ಷಮೆ ಕೇಳಬೇಕು ಎಂದರು.
ವಲಸೆ ಕಾರ್ಮಿಕರನ್ನು ಬಸ್ಗಳಲ್ಲಿ ಕರೆದುಕೊಂಡು ಹೋಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದಾಗ, ರಾಜ್ಯ ಸರ್ಕಾರ ವಾಹನಗಳ ಬಗ್ಗೆ ವಿವರಣೆ ಕೇಳಿತ್ತು. ಪಕ್ಷದ ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು ಒದಗಿಸಿರುವ ಪಟ್ಟಿಯಲ್ಲಿ ಕೆಲವು ವಾಹನ ಸಂಖ್ಯೆಗಳ ನಮೂದು ತಪ್ಪಾಗಿದೆ. ಆದರೂ ಕಾಂಗ್ರೆಸ್ ಒಂದು ಸಾವಿರ ಬಸ್ಗಳನ್ನು ಒದಗಿಸಲು ಬದ್ಧವಾಗಿದೆ ಎಂದಿದ್ದರು.