ನವದೆಹಲಿ: ಆತ್ಮನಿರ್ಭರ್ ಭಾರತ 3.0 ಅಡಿಯಲ್ಲಿ ಆರ್ಥಿಕತೆಗೆ ಉತ್ತೇಜನ ನೀಡುವ ಭಾರತ ಸರ್ಕಾರದ ಕ್ರಮದ ಭಾಗವಾಗಿ, ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಇಂದಿನ ಘೋಷಣೆ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಸಮಾಜದ ಕಟ್ಟ ಕಡೆಯ ವರ್ಗದವರಿಗೆ ಸಹಾಯ ಮಾಡುವ ನಮ್ಮ ಸರ್ಕಾರದ ಪ್ರಯತ್ನಗಳನ್ನು ಮುಂದುವರೆಸಲಾಗಿದೆ ಎಂದಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಹಾಗೂ ಜನರು ಏಳಿಗೆಗಾಗಿ "ಆತ್ಮನಿರ್ಭರ ಭಾರತ್" ಪ್ಯಾಕೇಜ್ ಮುಂದುವರೆದಿದೆ ಎಂದು ಪ್ರತಿಪಾದಿಸಿದ್ದಾರೆ. ಹೊಸ ಉದ್ಯೋಗಿಗಳಿಗೆ ಸಹಾಯಧನ ಪಡೆಯಲು, ಆರ್ಥಿಕ ಸಂಕಷ್ಟದಲ್ಲಿರುವ ಕ್ಷೇತ್ರಗಳ ಪುನಶ್ಚೆತನಕ್ಕಾಗಿ, ದೇಶದ ಉತ್ಪಾದನೆಯನ್ನು ಹೆಚ್ಚಿಸಲು, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಶಕ್ತಿ ತುಂಬಲು, ರೈತರ ಏಳಿಗಾಗಿ "ಆತ್ಮನಿರ್ಭರ ಭಾರತ್" ಪ್ಯಾಕೇಜ್ ಸಹಾಯವಾಗುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಮೂರನೇ ಪ್ಯಾಕೇಜ್ನಲ್ಲಿ ಆದಾಯ ತೆರಿಗೆ ನಿಯಮದಲ್ಲಿ ಸಡಿಲಿಕೆ, ವಸತಿ ಹಾಗೂ ರಿಯಲ್ ಎಸ್ಟೇಟ್ ವಲಯವನ್ನು ಉತ್ತೇಜಿಸಲು, ಪ್ರೋತ್ಸಾಹಕ ಪ್ಯಾಕೇಜ್ ಭಾಗವಾಗಿ ರೈತರಿಗೆ ಸಬ್ಸಿಡಿ ರಸಗೊಬ್ಬರ, ದೇಶೀಯ ರಕ್ಷಣಾ ಉಪಕರಣಗಳ ಉತ್ತೇಜನ, ಕೈಗಾರಿಕಾ ಕ್ಷೇತ್ರದ ಪ್ರೋತ್ಸಾಹ, ಸಣ್ಣ ಉದ್ಯಮಗಳಿಗೆ ತುರ್ತು ಸಾಲ ಖಾತರಿ, ಮನೆ ನಿರ್ಮಾಣ ಹಾಗೂ ಮಾರಾಟಕ್ಕೆ ತೆರಿಗೆ ಪರಿಹಾರ, ಹೊಸ ಉದ್ಯೋಗ ಸೃಷ್ಟಿ ಸೇರಿದಂತೆ ಹತ್ತು ಹಲವು ಉತ್ತೇಜನಾ ಚಟುವಟಿಕೆಗಳಿಗೆ ನೆರವಾಗುವ ಅಂಶಗಳನ್ನು ಉಲ್ಲೇಖಿಸಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಎಲ್ಲ ವಲಯಗಳ ಚೇತರಿಕೆಗಾಗಿ ಒಟ್ಟು 2.65 ಲಕ್ಷ ಕೋಟಿ ರೂ. ಗಳ ಹೊಸ ಆರ್ಥಿಕ ಪುನಶ್ಚೇತನ ಪ್ಯಾಕೇಜ್ ಅನ್ನು ಇಂದು ಘೋಷಣೆ ಮಾಡಿದ್ದಾರೆ. ಮಹಾಮಾರಿ ಕೊರೊನಾದ ಸಂಕಷ್ಟಕರ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಹೊರ ಬರುತ್ತಿರುವ ಮೂರನೇ "ಆತ್ಮನಿರ್ಭರ ಭಾರತ್" ಪ್ಯಾಕೇಜ್ ಆಗಿದೆ.